Monday, June 8, 2009

ಶುದ್ಧವಾಗಿರಲಿ ಈ ಜನಪದ


೧೨ ನೇ ಶತಮಾನದ ವಚನ ಸಾಹಿತ್ಯದ ನಂತರ ಬಂದ ಜನಪದ ಸಮಾಜ ಸುಧಾರಣೆಗೆ ಕೊಟ್ಟ ಕೊಡುಗೆ ಅಪಾರ. ಜನಪದಗಳು ಹಿಂದೆ ಸಮಾಜ ಸುಧಾರಣೆಗೆಂದು, ನೀತಿ-ನಿಯಮಗಳ ನೆನವಿಗಾಗಿ ಮತ್ತು ದಾರಿದೀಪಗಳಂತೆ ಕಾರ್ಯ ನಿರ್ವಹಿಸುತ್ತಿದ್ದವು. ಸಮಾಜದ ಅನಿಷ್ಟಗಳನ್ನು ಹೋಗಲಾಡಿಸಲು ಈ ಜನಪದಗಳ ಬಳಕೆ ಇತ್ತು. ಆದರೆ ಇಂದು ಅದರ ವ್ಯತಿರಿಕ್ತವಾಗಿ ಜನಪದಗಳು ನಮ್ಮ ಸಮಾಜದಲ್ಲಿ ರೂಪ ಪಡೆದಿವೆ ಎಂದರೆ ತಪ್ಪಾಗಲಾರದು.


ಹಿಂದಿನ ಜನಪದ ಹಾಡುಗಳು ಕೇಳಲು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಲು ಸೂಕ್ತವಾಗಿದ್ದವು. ಆದರೆ ಇಂದಿನ ಕೆಲ ಜನಪದ ಹಾಡುಗಳು ವಿಚಿತ್ರ ಮತ್ತು ತಿಳಿಯಲಂತು ಅಸಹ್ಯಕರ. ಇಂದಿನ ಕೆಲ ಜನಪದಗಳು ಅಶ್ಲೀಲತೆಯ ಜಾಡ ಹಿಡಿದು ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ನನ್ನ ಹಳ್ಳಿಯಲ್ಲಿ ಒಬ್ಬ ಹಿರಿಯ ವ್ಯಕ್ತಿ ಇಂದಿನ ಜನಪದ ಹಾಡುಗಳ ಬಗ್ಗೆ ಹೇಳಿದ ಮಾತು ನೆನಪಿಗೆ ಬರುತ್ತದೆ, ‘ಮಂದ್ಯಾಗ ಕೇಳಿದ್ರ ಮರ್ಯಾದಿ ತಕ್ಕೊಂಡ ಹೋಗುದ ಇಂತಾ ಹಾಡ’ ಈ ಹಿರಿಯನ ಭಾವನೆ ಒಂದು ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸುವಂತದ್ದು.


ಹಳ್ಳಿಗಳಲ್ಲಿ ಇದರ ಹಾವಳಿ ಹೆಚ್ಚು, ಟ್ರ್ಯಾಕ್ಟರ್(ವಾಹನ) ಗಳಲ್ಲಿ ಇಂತಹ ಅಶ್ಲೀಲ ಹಾಡುಗಳನ್ನು ಹಾಕ್ಕೊಂಡು ಹೊಂಟ್ರಂದ್ರ ಮನಿ ಬಾಕಲದಾಗ ನಿಂತ ಹೆಣ್ಣು ಮಕ್ಕಳು ಮನಿ ಒಳಗ ಹೊಗುತ್ತಾರೆ. ಅಂತಹ ಅವಮರ್ಯಾದೆಯನ್ನು ಇಂದಿನ ಕೆಲ ಜನಪದ ಹಾಡುಗಳು ಸೃಷ್ಟಿ ಮಾಡುತ್ತಿವೆ. ನಮ್ಮ ಸಂಸ್ಕೃತಿಯಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಸಮಾಜದ ಹಿತ ದೃಷ್ಟಿಯಿಂದ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿರುವುದು ಒಂದು ಸದುದ್ದೇಶದಿಂದ. ಆದರೆ ಇಂದಿನ ದಿನ ಸಣ್ಣ ಹುಡುಗನ ಬಾಯಲ್ಲಿ ಅಶ್ಲೀಲತೆಯ ಅಬ್ಬರ. ಇದಕ್ಕೆ ಕಾರಣ ಇಂತಹ ಅಶ್ಲೀಲ ಗೀತೆಗಳು ಎಂದರೆ ತಪ್ಪಾಗಲಾರದು.


ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು. ಎಂಬ ಬಸವಣ್ಣನವರ ವಚನದ ಅನುಕರಣೆ ಅವಶ್ಯಕ. ಸಮಾಜದ ಉದ್ಧಾರಕ್ಕಾಗಿ ಜನಪದ ವಾಗಬೇಕೆ ವಿನಹ ಮಾರಕಕ್ಕಾಗಬಾರದು. ಇಂತಹ ಅಶ್ಲೀಲ ಜನಪದಗಳು ವ್ಯಕ್ತಿಯ ವ್ಯಕ್ತಿತ್ವವನ್ನೇ ನಾಶ ಮಾಡುತ್ತವೆ, ಇನ್ನು ಮಕ್ಕಳ ಮನಸ್ಸಿನ ಮೇಲೆ ಇಂತಹ ಜನಪದ ಹಾಡುಗಳು ತೀವ್ರ ಪರಿಣಾಮ ಬೀರುತ್ತಿವೆ. ಆದ್ದರಿಂದ ಇಂತಹ ಅಶ್ಲೀಲ ಜನಪದಗಳ ಬಳಕೆ ನಿಲ್ಲಬೇಕು. ಸಾರ್ವಜನಿಕರು ಇದರ ಮೇಲೆ ನಿರ್ಭಂದನೆಗಳನ್ನು ಹೇರಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಹಾಡುಗಳನ್ನು ಕಾಣದಂತೆ ಮಾಡಬೇಕು.

No comments:

Post a Comment