Wednesday, June 3, 2009

ಅವಮಾನಕರವಾಗದಿರಲಿ ಈ ಅನುಕರಣೆ


ಮನುಷ್ಯನ ಜೀವನದಲ್ಲಿ ಅನುಕರಣೆ ಅವಶ್ಯಕ ಮತ್ತು ಅನಿವಾರ್ಯ. ಆದರೆ, ಆ ಅನುಕರಣೆ ಅವಮಾನಕರವಾಗಬಾರದು. ಈಗಿನ ನಮ್ಮ ಜೀವನ ಶೈಲಿಗೂ ಮತ್ತು ನಮ್ಮ ಹಿಂದಿನ ಸಂಸ್ಕೃತಿಗೂ ಹೋಲಿಸಿದರೆ ಬಹಳ ವ್ಯತ್ಯಾಸ ಕಂಡುಬರುತ್ತದೆ. ಇದಕ್ಕೆ ಕಾರಣ ಅನುಕರಣೆ.


ಪಾಶ್ಚಾತ್ಯರ ಆಕ್ರಮನಗಳ ನಂತರ ನಮ್ಮ ಸಮಾಜದಲ್ಲಿ ಹಲವಾರು ಬದಲಾವಣೆಗಳು ತೀವ್ರಗತಿಯಲ್ಲಿ ಆದವು. ಉಡುಗೆ-ತೊಡುಗೆಗಳಲ್ಲಿ, ಊಟ-ಉಪಚಾರಗಳಲ್ಲಿ, ಆಡುವ ಮಾತಿನಲ್ಲಿ, ಮೌಲ್ಯ-ಸಿದ್ಧಾಂತಗಳಲ್ಲಿ ಹೀಗೆ ಪ್ರತಿಯೊಂದರಲ್ಲೂ ಹಲವಾರು ಬದಲಾವಣೆಗಳಾದವು. ಇದಕ್ಕೆ ಕಾರಣ ಅನುಕರಣೆ ಎನ್ನಬಹುದು.


ಅನುಕರಣೆ ಎಂಬ ಪ್ರಕ್ರಿಯೆ ನಮ್ಮ ಸಂಪ್ರದಾಯ ಮತ್ತು ಸುಸಂಸ್ಕೃತ ಜೀವನ ಮಟ್ಟವನ್ನೇ ಬದಲಾಯಿಸಿಬಿಟ್ಟಿದೆ. ಈ ಅನುಕರಣೆ ಎಂಬ ಪ್ರಕ್ರಿಯೆ ಆಧುನಿಕತೆಯಿಂದ ಮತ್ತೆ ಪ್ರಾಚೀನತೆಗೆ ಕರೆದೋಯುತ್ತಿದೆ ಎಂದರೆ ತಪ್ಪಾಗಲಾರದು. ಹಿಂದೆ ಅಂದರೆ, ಪ್ರಾಚೀನ ಯುಗದಲ್ಲಿ ಮನುಷ್ಯ ಮೈಮೇಲೆ ಬಟ್ಟೆಗಳನ್ನು ಉಪಯೋಗಿಸದೆ ಬೆತ್ತಲೆಯಾಗಿ , ಸಿಕ್ಕ ಸಿಕ್ಕ ಪ್ರಾಣಿಗಳನ್ನು ಹಿಡಿದು ತಿಂದು ಬಿಡುತ್ತಿದ್ದ. ಅವನಿಗೆ ಸಂಬಂಧ, ಕಣಿಕರ, ಪ್ರೀತಿ- ವಾತ್ಸಲ್ಯಗಳ ಅರಿವು ಇರಲಿಲ್ಲ.


ಆ ಪ್ರಾಚೀನ ಮಾನವ ಸುಧಾರಿಸುತ್ತ ಆಧುನಿಕತೆಗೆ ಸಾಗಿ ಬಂದು ತನ್ನ ಹಲವಾರು ಕ್ರೂರತೆ ಮತ್ತು ಅಂಧತೆಗಳನ್ನು ಹೋಗಲಾಡಿಸಿ ಮಾನವೀಯತೆಯ ಜೀವನ ನಡೆಸತೊಡಗಿದ. ಈ ಹಂತಕ್ಕೆ ಬಂದ ಮಾನವ ಅಂದರೆ ಈಗಿರುವ ನಾವು ಉತ್ತಮ ಮೌಲ್ಯಗಳನ್ನು ಮತ್ತು ಮಾನವೀಯತೆಯ ಜೀವನವನ್ನು ಮರೆತು ಮತ್ತೆ ಪ್ರಾಚೀನ ಮಾನವರಾಗಲು ಹೊರಟಿದ್ದೇವೆ ಎಂಬುದು ಇಂದಿನ ದಿನ ಪಾಶ್ಚಾತ್ಯರಲ್ಲಿ ಬಟ್ಟೆಯ ಮೇಲಿನ ಆಸಕ್ತಿ ಕಡಿಮೆಯಾಗುತ್ತಿರುವುದನ್ನು ನೋಡಿದರೆ ತಿಳಿಯುತ್ತದೆ. ಈ ಪಾಶ್ಚಾತ್ಯರ ಜೀವನ ಶೈಲಿ ಇತ್ತೀಚೆಗೆ ನಮ್ಮಲ್ಲಿಯೂ ಕಾಣುತ್ತಿದೆ.


ಇನ್ನು ಇಂದಿನ ಆಹಾರದ ಬಗ್ಗೆ ಮಾತಾಡೋನ, ನಮ್ಮ ಸಮಾಜದಲ್ಲಿ ಮೊದಲಿನಿಂದ ಅಹಿಂಸೆಯೇ ನಮ್ಮ ಧರ್ಮ, ದಯೆ ಇರಲಿ ಸಕಲ ಪ್ರಾಣಿಗಳಲ್ಲಿ ಎಂಬ ತತ್ವದ ಆಚರಣೆ ಇತ್ತು. ಆದರೆ ಇಂದು ಪಾಶ್ಚಾತ್ಯರ ಆಹಾರ ಪದ್ಧತಿಯ ಅನುಕರಣೆಯಿಂದ ನಮ್ಮವರು ಕೂಡ ಹಿಂಸೆಯ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಭೂಮಿಯ ಮೇಲಿನ ಪ್ರತಿಯೊಂದು ಪ್ರಾಣಿಯನ್ನು ಮನುಷ್ಯ ಸ್ವಲ್ಪವೂ ಸಂಕೋಚ, ಕಣಿಕರವಿಲ್ಲದೆ ಭಕ್ಷಿಸುತ್ತಾನೆ. ಇದು ಪ್ರಾಚೀನ ಜೀವನಕ್ಕೆ ಹೋಲಿಕೆಯಾಗುತ್ತದೆ.


ಇನ್ನೊಂದು ಸಮಾಜದ ಅನುಕರಣೆ ಹೇಗೆ ನಡೆಯುತ್ತ ಹೋಗುತ್ತದೆಯೊ ಹಾಗೆ ತನ್ನತನವನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಹಾಗೇ ಇಂದು ನಮ್ಮ ಸಮಾಜದಲ್ಲಿ ಪ್ರತಿಯೊಂದರಲ್ಲೂ ಪಾಶ್ಚಾತ್ಯರ ಜೀವನ ಶೈಲಿಯನ್ನೇ ಕಾಣುತ್ತೇವೆ ವಿನಃ ನಮ್ಮತನವನ್ನಲ್ಲ. ೧೨ ನೇ ಶತಮಾನದ ಬಸವಣ್ಣನವರು ಸಮಾಜದ ಸುಧಾರಣೆಗೆ ಮತ್ತು ನಮ್ಮ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಿದರು. ವಿವೇಕಾನಂದರು ಭಾರತವೇ ಶ್ರೇಷ್ಟ ಎಂಬ ಮಂತ್ರ ಸಾರಿದರು. ಆದರೆ ನಾವು ಇಂದು ನಮ್ಮ ಸಂಸ್ಕೃತಿ, ಪರಂಪರೆಯನ್ನು ಮರೆತು ಪಾಶ್ಚಾತ್ಯರ ಅನುಕರಣೆ ಮಾಡುತ್ತಿದ್ದೇವೆ, ಇದು ಎಷ್ಟರ ಮಟ್ಟಿಗೆ ಸರಿ?


ನಮ್ಮ ದೇಶ ಹಿಂದಿನಿಂದಲೂ ತನ್ನದೆ ಆದ ವೈಶಿಷ್ಟ್ಯಗಳನ್ನು ಕಾಪಾಡಿಕೊಂಡು ಬಂದಿದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಬೇರೆಯವರ ಒಳ್ಳೆಯ ವಿಚಾರಗಳನ್ನು ಅನುಕರಣೆ ಮಾಡುವುದು ತಪ್ಪಲ್ಲ ಹಾಗಂತ ನಮ್ಮತನವನ್ನು ಮರೆಯುವುದು ತಪ್ಪು. ಕ್ಷನಿಕ ಸುಕಕ್ಕೋಸ್ಕರ ಇರುವ ನೀತಿಗಳನ್ನು ನಾವು ಅನುಕರಿಸುವುದು ಬಹಳ ಹೇಯ್ಯ.

No comments:

Post a Comment