Sunday, November 8, 2009

ಮೊಬೈಲ್ ಅಲೆಯಲ್ಲಿ ಎಸ್.ಟಿ.ಡಿ ಬೂತ್ ಗಳ ರೋಧನೆ

"ಯಾರೇ ಕೂಗಾಡಲಿ ಯಾರೇ ಚೀರಾಡಲಿ ಎಸ್.ಟಿ.ಡಿ ಬೂತ್ ನನಗೆ ಸಾಟಿಯಿಲ್ಲ" ಎಂದು ಮೊಬೈಲ್ ಗಳು ಬೀಗುತ್ತಿದ್ದರೆ, ಈ ಮೊಬೈಲ್ ಬಳಕೆಯಿಂದ ನಾವು ಅನಾತರಾಗುತ್ತಿದ್ದೇವೆ, ನಮ್ಮನ್ನು ಯಾರು ಮಾತನಾಡಿಸುವವರೇ ಇಲ್ಲ ಎಂದು ಎಸ್.ಟಿ.ಡಿ ಬೂತ್ ಗಳು ಗೋಳಿಡುತ್ತಿವೆ.

ನಿಜ ಇಂದಿನ ದಿನ ಮೊಬೈಲ್ ಗಳ ಅತಿಯಾದ ಬಳಕೆಯಿಂದ ಎಸ್.ಟಿ.ಡಿ ಬೂತ್ ಗಳು ಅನಾತವಾಗುತ್ತಿವೆ. ಪ್ರತಿಯೊಬ್ಬರು ಮೊಬೈಲ್ ಪ್ರೀಯರಾಗಿದ್ದಾರೆ. ಹಿಂದೆಲ್ಲ ಎಸ್.ಟಿ.ಡಿ ಬೂತ್ ಗಳೆಂದರೆ ಎಲ್ಲರಿಗೂ ಬಹಳ ಗೌರವ ಮತ್ತು ಪ್ರೀತಿ, ಏಕೆಂದರೆ ಮೊಬೈಲಗಳು ಬೆಳಕಿಗೆ ಬರುವುದಕ್ಕಿಂತ ಮುಂಚೆ ದೂರ ಸಂಪರ್ಕಕ್ಕೆ ಈ ಎಸ್.ಟಿ.ಡಿ ಬೂತ್ ಗಳೇ ಆಧಾರವಾಗಿದ್ದವು.

ದೂರದಲ್ಲಿದ್ದ ತಂದೆ- ತಾಯಿಯ ಜೊತೆ, ಅಕ್ಕ- ಅಣ್ಣನ್ ಜೊತೆ, ಪ್ರಿಯತಮ- ಪ್ರಿಯತಮೆಯ ಜೊತೆ ಸಂವಹನ ಮಾಡಲು ಈ ಎಸ್.ಟಿ.ಡಿ ದೂರ ಸಂಪರ್ಕ ಮಾದ್ಯಮವೇ ಸಹಕಾರಿಯಾಗಿತ್ತು. ಒಂದು ಕರೆಗೆ ೨ರಿಂದ ೩ ರೂ ದರವಿದ್ದರೂ ಲೆಕ್ಕಿಸದೇ ಜನ ಮಾತನಾಡುತ್ತಿದ್ದ ಕಾಲವದು. ಬೂತ್ ಗಳ ಹೊರಗೆ ಸಾಲು ಸಾಲು ಜನ ಕರೆ ಮಾಡಲು ಕಾಯುತ್ತಿದ್ದರು.

ಆದರೆ ಇಂದು ಆ ಎಸ್.ಟಿ.ಡಿ ಬೂತ್ ಗಳತ್ತ ತಲೆ ಹಾಕಿ ನೋಡುವವರೇ ಇಲ್ಲದಂತಾಗಿದೆ. ಇಂದಿನ ದಿನ ಅಗ್ಗ ದರದಲ್ಲಿ ಲಭ್ಯವಿರುವ ಮೊಬೈಲ್ ಗಳು, ಕಡಿಮೆ ದರದ ಕರೆಗಳು, ಉಚಿತ ಸಿಮ್ ಕಾರ್ಡಗಳು ಹೀಗೆ ಒಂದರ ಮೇಲೊಂದರಂತೆ ಸೌಲಭ್ಯಗಳು ಜನರಿಗೆ ಲಭ್ಯವಿರುವಾಗ ಎಸ್.ಟಿ.ಡಿ ಬೂತ್ ಗಳತ್ತ ಯಾರು ಹೋಗ್ತಾರೆ ಅಲ್ಲವೇ!

ಹಾಗಂತ ಎಸ್.ಟಿ.ಡಿ ಬೂತ್ ಗಳು ಮೊದಲಿನಂತೆ ದುಬಾರಿ ಇಲ್ಲ ಅವುಗಳಲ್ಲೂ ಹಲವಾರು ಬದಲಾವಣೆಗಳಾಗಿವೆ. ಕರೆಗಳ ದರದಲ್ಲಿ ಇಳಿಕೆಯಾಗಿದೆ. ಒಂದು ಕರೆಗೆ ೩ ರೂ ತನಕ ಇದ್ದ, ದರವನ್ನು ೧ರಿಂದ ೫೦ ಪೈಸೆಯ ತನಕ ಕಡಿಮೆ ಮಾಡಿ ಮೊಬೈಲ್ ಪ್ರತಿ ಸ್ಪರ್ಧಿಯಾಗಿ ನಿಂತಿದೆ.

ಆದರೆ ಇಂದಿನ ವೇಗಗತಿಯಲ್ಲಿ ಬೆಳೆಯುತ್ತಿರುವ ಕಾಲದಲ್ಲಿ ಜನರಿಗೆ ಎಸ್.ಟಿ.ಡಿ ಬೂತ್ ಗಳಲ್ಲಿ ನಿಂತು ಮಾತನಾಡುವಷ್ಟು ಸಮಯ ಇಲ್ಲದಂತಾಗಿದೆ. ಕೆಲಸದ ಜೊತೆಗೇ ದೂರವಾಣಿಯಲ್ಲಿ ಮಾತನಾಡಬೇಕೆಂಬುದು ಜನರ ಬೇಡಿಕೆ ಮತ್ತು ಆಶಯ. ಅದಕ್ಕೆ ತಕ್ಕಂತೆ ಮೊಬೈಲ್ ಗಳು ಇಂದು ಜನರಿಗೆ ಲಭ್ಯ ಇವೆ, ಯಾವುದೇ ಕೆಲಸ ಮಾಡುವಾಗಲೂ ಮೊಬೈಲ್ ನಲ್ಲಿ ಮಾತನಾಡಬಹುದಾಗಿದೆ. ಒಟ್ಟಿನಲ್ಲಿ ದೂರ ಸಂಪರ್ಕ ಸಾಧನಗಳ ಸ್ಪರ್ಧೆಯಲ್ಲಿ ಮೊಬೈಲ್ ಗಿಂತ ಎಸ್.ಟಿ.ಡಿ ಬೂತ್ ಹಿನ್ನಡೆ ಸಾಧಿಸಿದ್ದಂತು ನಿಜ.

ಎಷ್ಟೇ ಸೌಲಭ್ಯಗಳಿದ್ದರೂ ಎಸ್.ಟಿ.ಡಿ ಬೂತ್ ಗಳಷ್ಟು ನೆಮ್ಮದಿ ಮೊಬೈಲ್ ಗಳಲಿಲ್ಲ. ಏಕೆಂದರೆ ಬೂತ್ ಗಳಲ್ಲಿ ಮಾತನಾಡುತ್ತಿರುವಾಗ ಇನ್ನೊಬ್ಬರಿಗೆ ತೊಂದರೆಯಾಗಲೀ, ಕಿರುಕುಳವಾಗಲೀ ಇರುತ್ತಿರಲಿಲ್ಲ. ಆದರೆ ಇಂದು ಈ ಮೊಬೈಲ್ ಗಳದ್ದು ದೊಡ್ಡ ಕಿರಿಕಿರಿ. ಪಕ್ಕದಲ್ಲಿರುವವರಿಗೆ ತೊಂದರೆಯಾಗುತ್ತದೆ ಎಂದು ಲೆಕ್ಕಿಸದೇ ಮೊಬೈಲ್ ನಲ್ಲಿ ವಿಚಿತ್ರವಾಗಿ ಮಾತನಾಡುತ್ತಿರುವವರನ್ನು ಕಾಣಬಹುದು.

ದೇವಸ್ಥಾನದಲ್ಲಿದ್ದಾಗ, ಬಸ್ ನಿಲ್ಧಾಣದಲ್ಲಿದ್ದಾಗ, ವಾಹನಗಳನ್ನು ಓಡಿಸುತ್ತಿರುವಾಗ ತಾವು ಎಲ್ಲಿ ಇರುವರು ಎಂಬುದನ್ನು ಕೂಡ ಲೆಕ್ಕಿಸದೆ ಮೊಬೈಲ್ ಗಳಲ್ಲಿ ಮಾತನಾಡುವ ಜನರ ವರ್ತನೆ ಬಹಳ ವಿಚಿತ್ರ!

ಅತಿಯಾದ ಮೊಬೈಲ್ ಬಳಕೆಯಿಂದ ಹಲವಾರು ಅಪಘಾತಗಳಾಗುತ್ತಿರುವುದು ಇಂದಿನ ದಿನ ಹೆಚ್ಚಾಗಿದೆ. ಇತ್ತೀಚೆಗೆ ಮೊಬೈಲ್ ನಲ್ಲಿ ಮಾತನಾಡುತ್ತ ರೈಲ್ವೆಗೆ ಸಿಕ್ಕು ಸಾವನ್ನಪ್ಪಿದ ಮಹಿಳೆಯ ವರದಿಯನ್ನು ದಿನ ಪತ್ರಿಕೆಯಲ್ಲಿ ನೋಡಿದಾಗ ಮೊಬೈಲ್ ಗಳ ದುಷ್ಪರಿಣಾಮ ಎಷ್ಟು ಎಂಬುದು ತಿಳಿಯುತ್ತದೆ.

ಒಟ್ಟಿನಲ್ಲಿ ಮೊಬೈಲನ್ನು ಅವಶ್ಯಕತೆಗೆ ತಕ್ಕಂತೆ, ಇನ್ನೊಬ್ಬರಿಗೆ ತೊಂದರೆಯಾಗದಂತೆ ಬಳಸುವುದು ಒಳ್ಳೆಯದು.

Wednesday, October 28, 2009

ಕುಲಾಂತರಿಯ ಅವಾಂತರಗಳು


ಬಿ.ಟಿ ಹತ್ತಿಯಿಂದ ಆದ ದುಷ್ಪರಿಣಾಮಗಳನ್ನು ತಿಳಿದರೂ ಈಗ ಬದನೆಯನ್ನು ಕುಲಾಂತರಿಸಿದ್ದು ಒಂದು ಅವಿವೇಕದ ಕೆಲಸ ಎಂದರೆ ತಪ್ಪಾಗಲಾರದು.

ಕೃಷಿ ವಿಶ್ವವಿದ್ಯಾಲಯಗಳು ಈಗಾಗಲೇ ಪಿರಂಗಿ, ಮರಗೆಣಸು, ಆಲೂಗಡ್ಡೆ, ಟೊಮ್ಯಾಟೋ, ಬೆಂಡೇಕಾಯಿ ಮತ್ತು ಮೆಕ್ಕೇಜೋಳದಂತ ಬೆಳೆಗಳನ್ನು ಕುಲಾಂತರಿಸಿದೆ. ಹಲವಾರು ವಿಜ್ಣಾನಿಗಳು ಈ ಕುಲಾಂತರಿ ನೀತಿಯನ್ನು ವಿರೋಧಿಸಿದ್ದಾರೆ.
ಕುಲಾಂತರಿ ಬದನೆಯಿಂದ ಹೆಚ್ಚಿನ ಫಸಲು ಬರುತ್ತದೆಯಾದರೂ, ಅದರಿಂದಾಗುವ ದುಷ್ಪರಿಣಾಮಗಳೇ ಹೆಚ್ಚು. ಹಾಗೇ ಮೂಲ ದೇಶಿ ಬದನೆ ತಳಿಗಳು ಕಣ್ಮರೆಯಾಗುವಂತ ಗಂಭೀರ ಪರಿಸ್ಥಿತಿ ತಲೆದೋರಬಹುದು.

ಕುಲಾಂತರಿ ಬೆಳೆಗಳೆಂದರೇನು?
ವೈರಸ್, ಬ್ಯಾಕ್ಟೀರಿಯಾ, ಚೇಳು, ಜೇಡ ಮತ್ತಿತರ ಜೀವಿಗಳಿಂದ ವಂಶವಾಹಿಗಾನ್ನು ಹೊರತೆಗೆದು ಬದನೆ, ಬೆಂಡೇಕಾಯಿ, ಆಲೂಗಡ್ಡೆ, ಟೊಮ್ಯಾಟೋ ಮತ್ತು ಮೆಕ್ಕೆಜೋಳದಂಥ ಆಹಾರ ಧಾನ್ಯಗಳ ವಂಶವಾಹಿಯೊಳಗೆ ಬಲವಂತದಿಂದ ಸೇರಿಸಲಾಗುತ್ತದೆ. ಇದೇ ಕುಲಾಂತರಿ ಆಹಾರ ಧಾನ್ಯ.

Sunday, October 25, 2009

ಪತ್ರಕರ್ತರು ಯಾವಾಗಲು ಭಿನ್ನವಾಗಿ ಯೋಚಿಸಬೇಕು; ವಿಶ್ವೇಶ್ವರ ಭಟ್

ಪತ್ರಿಕೋದ್ಯಮಕ್ಕೆ ತನ್ನದೇ ಆದ ಸ್ಥಾನಮಾನಗಳಿವೆ, ಅದಕ್ಕೆ ತಕ್ಕ ಅರ್ಹತೆಗಳನ್ನು ಬೆಳೆಸಿಕೊಳ್ಳದೆ ಪತ್ರಿಕೋದ್ಯಮದಲ್ಲಿ ಬಾಳಲು ಸಾಧ್ಯವಿಲ್ಲ ಎಂದು ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಹೇಳಿದರು.


ಮೈಸೂರಿನ ಮಹಾಜನ ಪ್ರಥಮ ದರ್ಜೆ ಪತ್ರಿಕೋದ್ಯಮ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ ೯ ಮತ್ತು ೧೦, ೨೦೦೯ ರಂದು ನಡೆದ ರಾಜ್ಯ ಮಟ್ಟದ ಎರೆಡು ದಿನಗಳ ಕಾರ್ಯಾಗಾರದಲ್ಲಿ "ಪ್ರಸ್ತುತ ಪತ್ರಿಕೋದ್ಯಮ; ಪತ್ರಕರ್ತರ ಮುಂದಿರುವ ಸೃಜನಶೀಲ ಸವಾಲುಗಳು" ಎಂಬ ವಿಷಯದ ಮೇಲೆ ಅವರು ಮಾತನಾಡುತ್ತಿದ್ದರು.


ಪತ್ರಕರ್ತರು ಯಾವಾಗಲು ಭಿನ್ನವಾಗಿ ಯೋಚಿಸಬೇಕು ಇಲ್ಲದಿದ್ದರೆ ನಮಗು ಉಳಿದವರಿಗು ಏನು ವ್ಯತ್ಯಾಸ ಎಂದ ಅವರು ಇಂದಿನ ದಿನ ತಾಂತ್ರಿಕವಾಗಿ ಬಲಿಷ್ಟವಾಗಿರದಿದ್ದರೆ ನಮ್ಮ ಸ್ಠಾನವನ್ನು ಇನ್ನೊಬ್ಬ ಸಮರ್ಥ ಗಿಟ್ಟಿಸಿಕೊಳ್ಳುತ್ತಾನೆ. ಆದ್ದರಿಂದ ಪತ್ರಕರ್ತರಾಗುವವರು ಮೊದಲೆ ಎಲ್ಲ ವಿಷಯದ ಬಗ್ಗೆ ತಿಳಿದಿರಬೇಕು ಎಂದು ಸಲಹೆ ನೀಡಿದರು.



೧೯೧೩ ರಲ್ಲಿ ಪಾರಿವಾಳದ ಮೂಲಕ ಸುದ್ಧಿ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರೆ ಇಂದಿನ ದಿನ ಕ್ಷಣ ಮಾತ್ರದಲ್ಲಿ ಸುದ್ಧಿ ವಿನಿಮಯ ಮಾಡಬಹುದಾದಂತ ತಂತ್ರಜ್ಣಾನಗಳು ಬಂದಿವೆ. ಆದ್ದರಿಂದ ಪತ್ರಕರ್ತರಾಗುವವರು ಅಂತರ್ಜಾಲದ ಬಗ್ಗೆ ಅಪಾರ ಜ್ಣಾನವನ್ನು ಉಳ್ಳವರಾಗಿರಬೇಕು ಎಂದರು.



ಹಲವಾರು ಪತ್ರಿಕೆಗಳು ಹಿಂದಿನಂತೆಯೆ ಇವೆ. ಪುಟಗಳಲ್ಲಾಗಲಿ ಬರಹದ ಶೈಲಿಯಲ್ಲಾಗಲಿ ಬದಲಾವಣೆ ಎಂಬುದಿಲ್ಲ. ಆದ್ದರಿಂದ ಪತ್ರಿಕೆಗಳು ಬದಲಾಗಬೇಕಿದೆ. ಜನಮನಕ್ಕೆ ಹತ್ತಿರವಾದ ಸುದ್ದಿಗಳು ಮುಖಪುಟದಲ್ಲಿ ಬರಬೇಕು ಮತ್ತು ಪತ್ರಕರ್ತರು ಸೃಜನಶೀಲತೆಯಿಂದ ಯೋಚಿಸಬೇಕು ಎಂದರು.

Friday, June 19, 2009

ಸಂಜೀವಿನಿಯಂತೆ ಶಿವಪ್ಪಣ್ಣನ ಸಿಹಿ ನೀರಿನ ಬಾವಿ



ಊರಲ್ಲಿರುವ ಕೆರೆಗಳೆಲ್ಲ ಬತ್ತಿ ಹೋದರು ಚಿಂತೆಯಿಲ್ಲ, ಗುದಗಿ ಶಿವಪ್ಪನ್ನನ ತೋಟದಲ್ಲಿರುವ ಸಿಹಿ ನೀರು ಬಾವಿ ಇದೆಯಲ್ರಿ. ಇಡೀ ಊರಿನ ಜನರೆಲ್ಲರೂ ಶಿವಪ್ಪನ್ನನ ಬಾವಿಯಲ್ಲಿ ಕುಡಿಯಲು ನಿರೋಯುತ್ತಿದ್ದರು ಶಿವಪ್ಪನ್ನ ಬೇಡೆನ್ನದ ಮುಗ್ದ ಮತ್ತು ಉಧಾರ ಮನಸ್ಸಿನವನು. ಅಂದಹಾಗೆ ಯಾರದು ಶಿವಪ್ಪನ್ನ! ಅಂತೀರಾ.





ಧಾರವಾಡ ಜಿಲ್ಲೆ ನವಲಗುಂದ ತಾಲೂಕಿ ಶಲವಡಿ ಗ್ರಾಮದ ಪ್ರಗತಿಪರ ರೈತ ಈ ಶಿವಪ್ಪನ್ನ. ಶಲವಡಿ ಎಂದ ಕೂಡಲೇ ಹಿಂದೆಲ್ಲ ನೀರಿನ ಸಮಸ್ಯೆಯೇ ಎದ್ದು ಕಾಣುತ್ತಿತ್ತು, ಶಲವಡಿಯಷ್ಟೇ ಅಲ್ಲ ನವಲಗುಂದ ತಾಲೂಕಿನ ಹಲವಾರು ಗ್ರಾಮಗಳು ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದವು. ಈಗಲೂ ಕೆಲವೊಂದು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವುದು ಕಾಣಬಹುದು.





ಹಿಂದೆ ಮಳೆ ಹೋಯಿತೆಂದರೆ ಕುಡಿಯುವ ನೀರಿಗೆ ಪರದಾಟ ಶುರು. ಇದಕ್ಕೆ ಶಲವಡಿ ಗ್ರಾಮ ಒಂದು ಉದಾಹರಣೆ. ಶಲವಡಿಯಲ್ಲಿ ಹಲವಾರು ಬಾವಿ , ಕೆರೆಗಳಿವೆ, ಅವು ಮಳೆಯಾಧಾರಿತ ನೀರಿನ ಮೂಲಗಳಾಗಿದ್ದವು. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲೂಶಲವಡಿಯ ಜನರಿಗೆ ಸಂಜೀವಿನಿಯಂತೆ ನೆರವಾಗಿದ್ದು ಗುದಗಿ ಶಿವಪ್ಪನ್ನನ ಸಿಹಿ ನೀರಿನ ಬಾವಿ .





ಗುದಗಿಯವರ ತೋಟ ಎಂದರೆ, ಏನೋ ಮನಸ್ಸಿಗೆ ತಂಪಾಗುತ್ತದೆ ಏಕೆಂದರೆ ಆ ತೋಟ ಅಷ್ಟು ಹಸಿರು ಮತ್ತು ಶಿವಪ್ಪನ್ನನ ವಿಶಾಲ ಹೃದಯ . ಹಳ್ಳದ ದಂಡೆಯ ಮೇಲೆ ಶಿವಪ್ಪನ್ನನ ತೋಟ ಅದರಲ್ಲಿ ತನ್ನ ತಂದೆಯ ಕಾಲದಲ್ಲಿ ನಿರ್ಮಾಣವಾದ ಬಾವಿ . ಊರಿನ ಜನರೆಲ್ಲರೂ ಬರಗಾಲದಲ್ಲಿ ಈ ಬಾವಿ ಯಿಂದಲೇ ಯತ್ತಿನ ಬಂಡಿ, ಒತ್ತುವ ಬಂಡಿಗಳ ಮೂಲಕ ನೀರನ್ನು ಒಯ್ಯುತ್ತಿದ್ದರು. ಶಿವಪ್ಪನ್ನ ಆ ಭಾವಿಯಲ್ಲಿ ಒಂದು ಬೋರ್ವೆಲ್ ಹಾಕಿಸಿದ್ದಾನೆ, ತನ್ನ ಡಿಸೇಲ್ ಹೋದರು ಪರವಾಗಿಲ್ಲ ಅಂತ ನೀರಿಗೆ ಬಂದವರಿಗೆ ಆ ಬೋರ್ವೆಲ್ ಮುಖಾಂತರ ನೀರು ಕೊಡುತ್ತಿದ್ದ. ದೊಡ್ಡ ಟ್ಯಾಂಕರ್ ಗಳಿಗೆ ಮಾತ್ರ ಹಣ ಪಡೆಯುತ್ತಿದ್ದ ಅದು ಆತ್ಮೀಯತೆಯಿಂದ.

Thursday, June 18, 2009

ಆಕಳು ಮೂತ್ರ ಬೆಳೆಗಳಿಗೆ ಮೂಲಮಂತ್ರ

ಭಾರತೀಯ ರೈತರಿಗೆ ಮತ್ತು ಜಾನುವಾರುಗಳಿಗೆ ಬಿಡದ ನಂಟು. ಭೂಮಿಯನ್ನು ಬಿತ್ತುವುದರಿಂದ ಹಿಡಿದು ಫಸಲು ಪಡೆಯುವತನಕ ರೈತ ಜಾನುವಾರುಗಳನ್ನೇ ಅವಲಂಬಿಸಿರುತ್ತಾನೆ. ಅದರಲ್ಲೂ ಆಕಳು ರೈತನಿಗೆ ದೇವರ ಸಮಾನವಿದ್ದಂತೆ. ಆಕಳು ಮೂತ್ರವನ್ನು ಬೆಳೆಗಳಿಗೆ ಗೊಬ್ಬರವನ್ನಾಗಿ ಉಪಯೋಗಿಸುತ್ತಾರೆ. ಆಕಳು ಮೂತ್ರ (ಶಗಣಿ) ಬೆಳೆಗಳಿಗೆ ಮೂಲ ಮಂತ್ರವಿದ್ದಂತೆ.


ಯಾವ ರಾಸಾಯನಿಕ ಗೊಬ್ಬರಗಳು ಮಾಡದಂತ ಕೆಲಸವನ್ನು ಆಕಳು ಮೂತ್ರ ಮಾಡುತ್ತದೆ. ಬೆಳೆಗಳಿಗೆ ನೀರು ಕೊಡುವ ಸಮಯದಲ್ಲಿ ನೀರಿನ ಜೊತೆ ಆಕಳು ಶಗಣಿಯನ್ನು ಮಿಶ್ರಣ ಮಾಡಲಾಗುತ್ತದೆ. ಇದು ಪ್ರತಿ ಬೆಳೆಯನ್ನು ತಲುಪುತ್ತದೆ. ಬೆಳೆ ಪುಷ್ಟಿದಾಯಕವಾಗಲು ಈ ಪದ್ಧತಿ ಸಹಕಾರಿಯಾಗುತ್ತದೆ.

ವಿಧಾನ -

ಹೊಲಕ್ಕೆ ನೀರು ಬರುವ ಮೂಲ ಅಂದರೆ, ಕಾಲುವೆ ಅಥವಾ ಕೊಳವೆ ಹೀಗೆ ನೀರು ಬರುವ ಜಾಗದಲ್ಲಿ ಒಂದು ಸಣ್ಣ ಗುಂಡಿಯನ್ನು ತೋಡಿ . ಆ ಗುಂಡಿಯಲ್ಲಿ ಆಕಳು ಮೂತ್ರವನ್ನು ಶೇಕರಿಸಬೇಕು , ನಂತರ ಕೊಳವೆಯ ಮುಖಾಂತರ ನೀರು ಬಂದಾಗ ಕಟ್ಟಿಗೆಯ ಸಹಾಯದಿಂದಲೋ ಅಥವಾ ಕೈ ಮುಖಾಂತರ ಆ ಆಕಳು ಮೂತ್ರವನ್ನು ಕಲಿಸಬೇಕು. ಹಾಗೆ ಮಾಡುವಾಗ ನೀರಿನಲ್ಲಿ ಮೂತ್ರ ಮಿಶ್ರಣವಾಗಿ ಪ್ರತಿ ಬೆಳೆಯ ಬೇರುಗಳಿಗೆ ನೇರವಾಗಿ ತಲುಪುತ್ತದೆ. ಇದರಿಂದ ಫಸಲು ಚೆನ್ನಾಗಿ ಬರುತ್ತದೆ. ಮತ್ತು ಭೂಮಿಯು ಫಲವತ್ತತೆಯನ್ನು ಕಾಯ್ದುಕೊಳ್ಳುತ್ತದೆ.






Saturday, June 13, 2009

ಭವ್ಯ ಪರಂಪರೆಯ ಹಂಪಿ

ಕನ್ನಡ ನಾಡಿನ ಶಿಲ್ಪಕಲೆ , ಸಂಸ್ಕೃತಿ, ಸಾಹಿತ್ಯ, ಪ್ರತಿ ಬಿಂಬ ಇಂದಿನ ಹಂಪಿ. ಬಳ್ಳಾರಿ ಜಿಲ್ಲೆಯ, ಹೊಸಪೇಟಿಯ ಹತ್ತಿರವಿರುವ ಈ ಹಂಪಿ ವಿಜಯ ನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಭವ್ಯ ಸಂಸ್ಕೃತಿಯ ನೆಲೆವೀಡು ಹಂಪಿ. ಇಂದಿಗೂ ತನ್ನ ಗತವೈಭವವನ್ನು ಸ್ಮಾರಕಗಳು ಮತ್ತು ದೇವಾಲಯಗಳಿಂದ ಎತ್ತಿ ಸಾರುತ್ತದೆ.



ಹಂಪಿಯನ್ನು ಹಲವಾರು ಪ್ರಸಿದ್ಧ ರಾಜ ಮನೆತನಗಳು ಅಳಿಹೊಗಿದ್ದಾರೆ ಅವರು ಕನ್ನಡ ನಾಡು ನುಡಿಗೆ ಕೊಟ್ಟ ಕೊಡುಗೆ ಅಪಾರ. ಅವರಲ್ಲಿ ವಿಜಯ ನಗರ ಸಾಮ್ರಾಜ್ಯವು ಒಂದು, ಅದರಲ್ಲೂ ಶ್ರೀ ಕೃಷ್ಣದೇವರಾಯನ ಕಾಲವನ್ನು ಸುವರ್ಣ ಯುಗ ಎಂದು ಹೇಳಲಾಗಿದೆ. ಮೊದಲು ಹಂಪಿಯನ್ನು ಪಂಪ, ವಿರುಪಾಕ್ಷಪುರ ಮತ್ತು ವಿಜಯ ನಗರ ಎಂತಲೂ ಕರೆಯುತ್ತಿದ್ದರೆಂದು ಇತಿಹಾಸದ ಮೂಲಕ ತಿಳಿಯಲಾಗಿದೆ. ಹಂಪಿ ತನ್ನದೇ ಆದ ವಿಶಿಷ್ಟವಾದ ವಾಸ್ತುಶಿಲ್ಪವನ್ನು ಹೊಂದಿದೆ.



ವಿರುಪಾಕ್ಷ ದೇವಾಲಯ, ಉಗ್ರ ನರಸಿಂಹ, ವಿಠ್ಠಲ ದೇವಾಲಯ, ಲೋಟಸ್ ಮಹಲ್, ನಕ್ಷತ್ರ ಬಾವಿ , ಅನೆ ಲಾಯಗಳು, ಸಾಸಿವೆ ಗಣಪತಿ ಹೀಗೆ ಹಲವಾರು ಬಗೆಯ ಶಿಲ್ಪದಿಂದ ಸ್ಥಾಪಿಸಲಾದ ಸ್ಮಾರಕಗಳು ಮತ್ತು ದೇವಾಲಯಗಳು ಹಂಪಿಯಲ್ಲಿ ಕಾಣ ಸಿಗುತ್ತವೆ.

Friday, June 12, 2009

ಸಮಾಜ ಸುಧಾರಕ ಬಸವಣ್ಣ


೧೨ ನೇ ಶತಮಾನದ ಕ್ರಾಂತಿ ಯೋಗಿ, ಸಮಾಜ ಸುಧಾರಕ ಮತ್ತು ವೀರಶೈವ ಧರ್ಮದ ಸುಧಾರಕನಾದ ಬಸವಣ್ಣನವರು ನಮ್ಮ ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರ. ಅಷ್ಟೇ ಅಲ್ಲದೆ ಇವರ ಕಾಲದಲ್ಲಿ ವಚನ ಸಾಹಿತ್ಯವೂ ಹರಿದು ಬಂತು.
ಬಸವಣ್ಣನವರು ೧೨ ನೇ ಶತಮಾನದಲ್ಲಿ ಇದ್ದಂತ ಹಲವಾರು ಅನಿಷ್ಟ ಪದ್ಧತಿಗಳಾದ ಜಾತಿ, ಮೇಲು- ಕೀಳು, ಬಡ- ಬಲ್ಲಿದ ಹೀಗೆ ಇಂತಹ ಪದ್ಧತಿಗಳ ವಿರುದ್ದ ಹೋರಾಡಿ ಸಮಾಜದ ಸುಧಾರಣೆಗೆ ಶ್ರಮಿಸಿದರು. ಅಷ್ಟೇ ಅಲ್ಲದೇ ಮಹಿಳೆಯರಿಗೂ ಸಮಾನ ಸ್ಥಾನ ಮಾನ ಸಿಗಲೆಂದು ಪ್ರತಿಪಾದಿಸಿದರು.