Saturday, May 30, 2009

ಜಲಿಯನ್ ವಾಲಾಬಾಗ್ ಹತ್ಯಾಖಾಂಡ


ಅಸಂಖ್ಯಾತ ವೀರರ ತ್ಯಾಗದ ಬಲಿದಾನದ ಪ್ರತೀಕವೇ ಇಂದಿನ ಸ್ವತಂತ್ರ್ಯ ಭಾರತ. ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಹಲವಾರು ಭಾರತೀಯರ ರಕ್ತದ ಕಲೆಗಳಿವೆ. ಕ್ರೂರ ಬ್ರಿಟೀಷರ ಕಪಿಮುಷ್ಟಿಯಿಂದ ಭಾರತ ಮಾತೆಯನ್ನು ಸ್ವತಂತ್ರ್ಯಗೊಳಿಸಲು ಸಹಸ್ರಾರು ಜನರು ಪ್ರಾಣ ಬಲಿದಾನ ಮಾಡಿದ್ದಾರೆ. ಅದಕ್ಕೆ ಒಂದು ನಿದರ್ಶನ ಜಲಿಯನ್ ವಾಲಾಬಾಗ್.


ಎಪ್ರೀಲ್ ೧೩, ೧೯೧೯ ಆ ವೈಶಾಖಿನ ಸಮಯ ಕ್ರೂರ ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ ಸುಮಾರು ಎರೆಡು ಸಾವಿರ ಮುಗ್ಧ ಹಿಂದು, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಪಾವನವಾದ ಪ್ರದೇಶ ಜಲಿಯನ್ ವಾಲಾಬಾಗ್, ಗಾಂಧೀಜಿ, ಡಾ. ಕಿಚ್ ಲ್ಯೂ ಮತ್ತು ಡಾ.ಸತ್ಯಪಾಲ್ ಅವರನ್ನು ಬ್ರಿಟೀಷ ಸರ್ಕಾರ ಬಂಧನಕ್ಕೊಳಪಡಿಸಿದ್ದರಿಂದ ಆಕ್ರೋಶಗೊಂಡ ಜನ ಪ್ರತಿಕಾರಕ್ಕಾಗಿ ಕಾಯುತ್ತಿದ್ದ ಸಮಯವದು, ಈ ಹಿನ್ನಲೆಯಲ್ಲಿ ಸುಮಾರು ಇಪ್ಪತ್ತು ಸಾವಿರ ಜನರು ಅಮೃತಸರದ ಜಲಿಯನ್ ವಾಲಾಬಾಗ್ ನಲ್ಲಿ ಸಭೆ ಸೇರಿದ್ದರು. ಆ ಸಭೆಯ ಭಾಷಣಕಾರ ಹಂಸರಾಜ್.


ಬ್ರಿಟೀಷರ ವಿರುದ್ಧ ಹೋರಾಡುತ್ತಿರುವ ಭಾರತೀಯರನ್ನು ಬಗ್ಗುಬಡಿಯಬೇಕೆಂದು ಕಾಯುತ್ತಿದ್ದ ಅಂದಿನ ಬ್ರಿಟೀಷ ಸೇನಾಧಿಕಾರಿ ಇ.ಎಚ್.ಡಯರ್ ಗೆ ಜಲಿಯನ್ ವಾಲಾಬಾಗ್ ಒಂದು ವ್ಯವಸ್ಥಿತವಾದ ಸ್ಥಳವಾಗಿತ್ತು. ಈ ಇಕ್ಕಟ್ಟಾದ ಸ್ಥಳದಲ್ಲಿ ಡಯರ್ ತನ್ನ ಸೈನ್ಯದ ತುಕುಡಿಗಳಿಂದ ಆ ಸಭೆಯ ಜನರ ಮೇಲೆ ಒಟ್ಟು ೧,೬೫೦ ಸುತ್ತುಗಳಷ್ಟು ಗುಂಡಿನ ಮಳೆ ಸುರಿಸಿದ, ಕ್ರೂರಿ ಡಯರ್ ಸ್ವಲ್ಪವೂ ಕರುಣೆಯಿಲ್ಲದೆ ಸೇರಿದ ಸುಮಾರು ೨೦ ಸಾವಿರ ಜನರಲ್ಲಿ ೧೫೧೬ ಜನರ ಸಾವಿಗೆ ಕಾರಣನಾದ. ೧೦ ನಿಮಿಷದಲ್ಲಿ ಆ ಸಭೆ ರಕ್ತಮಯವಾಗಿ ರಾಸಿರಾಸಿ ಹೆಣಗಳಿಂದ ಕೂಡಿತು.


೧೯೧೯ರ ಮಾರಣ ಹೋಮದಲ್ಲಿ ವೀರ ಮರಣವನ್ನಪ್ಪಿದವರ ಕುಟುಂಬಗಳು ಅನಾಥವಾದವು. ಗಾಂಧೀಜಿಯವರ ಶಾಂತಿ, ಅಹಿಂಸೆಯ ತತ್ವಕ್ಕೆ ಬದ್ಧರಾಗಿದ್ದ ಜನರು ಹಿಂಸೆಯಿಂದ ಬೆಂದುಹೋದರು. ಈ ಮಾರಣ ಹೋಮದಿಂದ ಇಡೀ ಭಾರತವೇ ರೋಷದಿಂದ ಗುಡುಗಿತು. ಸುಭಾಷ ಚಂದ್ರ ಬೋಸ್, ರವೀಂದನಾಥ ಟಾಗೋರ್ ನಂತ ಕ್ರಾಂತಿವೀರರು ಸಿಡಿದೆದ್ದರು. ಗಾಂಧೀಜಿ ಮತ್ತು ಟಾಗೋರ ರವರು ತಮಗೆ ಬಂದಿದ್ದ ಬಿರುದುಗಳನ್ನು ಬ್ರಿಟೀಷ ಸರ್ಕಾರಕ್ಕೆ ಹಿಂತಿರುಗಿಸಿದ್ದು ಈ ಸಮಯದಲ್ಲೇ. ಅಂದಿನ ಜಲಿಯನ್ ವಾಲಾಬಾಗ್ ಹತ್ಯಾಖಾಂಡ ೧೯೪೭ರ ಸ್ವತಂತ್ರ್ಯ ಸಂಗ್ರಾಮಕ್ಕೆ ಅಡಿಪಾಯವಾಯಿತು.


ಹೀಗೆ ಭಾರತಕ್ಕಾಗಿ ಸಹಸ್ರಾರು ವೀರರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು, ಭಾರತಾಂಬೆಗೆ ಪ್ರಾಣ ತ್ಯಾಗ ಮಾಡಿದ ವೀರರಿಗೆ ಶಾಂತಿ ಕೋರುವುದು ತಮ್ಮ ಕರ್ತವ್ಯ ಮತ್ತು ಈಗಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ.

ಉಚ್ಛಾಟಿಸಿ ಈ ಭಿಕ್ಷಾಟನೆಯನ್ನು



ಭಿಕ್ಷಾಟನೆ ಒಂದು ಸಾಮಾಜಿಕ ಪಿಡುಗು ಹಾಗೂ ಅಪರಾಧ, ಕರ್ನಾಟಕ ಭಿಕ್ಷಾಟನೆ ನಿಷೇದ ಅಧಿನಿಯಮ ೧೯೭೫ ರ ಸೆಕ್ಷೆನ್ ೩ರ ಅನ್ವಯ ಭಿಕ್ಷೆಬೇಡುವುದನ್ನು ನಿಷೇಧಿಸಲಾಗಿದೆ. ಭಿಕ್ಷೆ ಬೇಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.



ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯಿದೆ ೧೯೭೫ ರ ಸೆಕ್ಷೆನ್ ೧೨ ರನ್ವಯ ಭಿಕ್ಷಾಟನೆಯಲ್ಲಿ ತೊಡಗಿದ ಅಪರಾಧಕ್ಕಾಗಿ ಗರಿಷ್ಠ ೩ ವರ್ಷದವರೆಗೆ ಶಿಕ್ಷೆಗೆ ಗುರಿಪಡಿಸಲು ಅವಕಾಶವಿದೆ. ಇಷ್ಟೆಲ್ಲಾ ಕಾಯ್ದೆ, ಕಾನೂನುಗಳಿದ್ದರೂ ಭಿಕ್ಷಾಟನೆ ಪ್ರಚಲಿತವಿರುವುದು ವಿಷಾದನೀಯ . ಈ ಭಿಕ್ಷಾಟನೆ ಪಿಡುಗಿನಿಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹೊರತಾಗಿಲ್ಲ. ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಸಾರ್ವಜನಿಕ ಸ್ಥಳಗಳಾದ ದೇವಾಲಯ, ಚರ್ಚ, ಮಸೀದಿ, ಬಸ್ ನಿಲ್ದಾಣ, ರೇಲ್ವೇ ನಿಲ್ದಾಣ ಮತ್ತು ಸಿನಿಮಾ ಮಂದಿರಗಳ ಮುಂದೆ ಹಾಗೂ ಮನೆ, ಅಂಗಡಿ ಮುಂತಾದ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಿರುವವರನ್ನು ನಾವು ಕಾಣಬಹುದು.



ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಇಂಥಹ ಭಿಕ್ಷುಕರನ್ನು ದೃಷ್ಠಿಯಲ್ಲಿಟ್ಟುಕೊಂಡು `ನಿರಾಶ್ರಿತರ ಪರಿಹಾರ ಕೇಂದ್ರ'ಗಳನ್ನು ತೆರೆದಿದೆ. ಕರ್ನಾಟಕದ ಒಟ್ಟು ೧೪ ಜಿಲ್ಲೆಗಳಲ್ಲಿ ಈ ನಿರಾಶ್ರಿತರ ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ. ಅದೇ ರೀತಿ ಹುಬ್ಬಳ್ಳಿಯ ರಾಯಾಪುರದಲ್ಲಿ `ನಿರಾಶ್ರಿತರ ಪರಿಹಾರ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ.



ಈ ಕೇಂದ್ರದಲ್ಲಿ ೯೮ ಪುರುಷರು ಮತ್ತು ೨೬ ಮಹಿಳೆಯರಿಗೆ ಆಶ್ರಯ ನೀಡಲಾಗಿದೆ. ಇಲ್ಲಿರುವ ನಿರಾಶ್ರಿತರಿಗೆ ಫೈಲ್ ಮತ್ತು ಫಿನಾಯಿಲ್ ತಯಾರಿಸುವ ತರಬೇತಿಯನ್ನು ಕೊಟ್ಟು ಅವರಿಂದಲೇ ತಯಾರ ಮಾಡಿಸುತ್ತಾರೆ. ತಿಂಗಳಿಗೆ ಎರೆಡು ಸಾರಿ ವೈದ್ಯರನ್ನು ಇಲ್ಲಿಗೆ ಕರೆಯಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ. ಒಬ್ಬ ವ್ಯಕ್ತಿಯನ್ನು ೬ ತಿಂಗಳಿಂದ ೩ ವರ್ಷದವರೆಗೆ ಈ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಇಟ್ಟುಕೊಂಡು, ನಂತರ ಅವನಿಗೆ ಭಿಕ್ಷೆಯಲ್ಲಿ ತೊಡಗದಂತೆ ಕಟ್ಟಳೆಗಳನ್ನು ಹಾಕಿ ಅವರನ್ನು ಬಿಡಲಾಗುತ್ತದೆ.



ರಾಯಾಪುರ ನಿರಾಶ್ರಿತರ ಪರಿಹಾರ ಕೇಂದ್ರದ ಸುಪಿರಿಯೆಂಟೆಡ್ ಆದ ಶ್ರೀ ದಿವಾಕರ್ ಶಂಕಿನದಾಸರ್ ಹೇಳಿದ್ದು ಹೀಗೆ, ಭಿಕ್ಷುಕರು ಹೆಚ್ಚಾಗಲು ಕಾರಣ ಧಾನಿಗಳು, ಭಿಕ್ಷಾಟನೆ ಕಡಿಮೆಯಾಗಬೇಕಾದರೆ ಭಿಕ್ಷೆ ನೀಡುವುದನ್ನು ನಿಲ್ಲಿಸಬೇಕು. ಇಂದಿನ ಕೆಲಸದ ಒತ್ತಡದಲ್ಲಿ ಮತ್ತು ಅವಿಭಕ್ತ ಕುಟುಂಬಗಳ ಹೆಚ್ಚಳದಿಂದ ಕುಟುಂಬದಲ್ಲಿರುವ ವೃದ್ಧರು, ಅಂಗವೈಕಲ್ಯ ಹೊಂದಿದವರು ಬೀದಿಗೆ ಬರುವಂತಾಗಿದೆ.



ಭಿಕ್ಷುಕರನ್ನು ತಂದು ಅವರಿಗೆ ಊಟ, ಬಟ್ಟೆ, ವಸತಿ ಕೊಡುವದರಿಂದ ಭಿಕ್ಷಾಟನೆ ನಿಲ್ಲದು, ಬಿಕ್ಷುಕರಿಗೆ ಅವರವರ ಅಭಿರುಚಿಯ ಉದ್ಯೋಗದ ಮೇಲೆ ತರಬೇತಿಯನ್ನು ಕೊಟ್ಟು ಇಲ್ಲಿಂದ ಹೊರಗೆ ಹೋದ ಮೇಲೆ ಅವರು ದುಡಿದು ತಮ್ಮ ಜೀವನವನ್ನು ನಡೆಸಬೇಕು ಅಂದಾಗ ಭಿಕ್ಷಾಟನೆ ನಿಲ್ಲುತ್ತದೆ. ಎಂಬುದು ದಿವಾಕರ್ ರವರ ನಿಲುವು. ಆದರೆ ಇಷ್ಟೊಂದು ವ್ಯವಸ್ಥೆಯನ್ನು ಒದಗಿಸಲು ಈ ಕೇಂದ್ರ ಶಕ್ತಿಯುತವಾಗಿಲ್ಲ ಆದ್ದರಿಂದ ಸರ್ಕಾರ ಈ ನಿರಶ್ರಿತರ ಪರಿಹಾರ ಕೇಂದ್ರಕ್ಕೆ ಹೆಚ್ಚಿನ ಯೋಜನೆಗಳನ್ನು ಜಾರಿಮಾಡುವುದು ಅವಶ್ಯಕ.



ಈ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಸುಮಾರು ೧೫೦ ಜನ ಭಿಕ್ಷುಕರಿಗೆ ಆಶ್ರಯ ನೀಡಬಹುದು. ಆದರೆ ಹುಬ್ಬಳ್ಳಿಯೊಂದರಲ್ಲೇ ಅಸಂಖ್ಯಾತ ಭಿಕ್ಷುಕರಿದ್ದಾರೆ ಅವರಿಗೆಲ್ಲ ಈ ಕೇಂದ್ರದಲ್ಲಿ ಆಶ್ರಯ ಕೊಡಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಈ ನಿರಾಶ್ರಿತರ ಕೇಂದ್ರಗಳಿಗೆ ಹೆಚ್ಚಿನ ಒತ್ತು ಕೊಟ್ಟು ಆರ್ಥಿಕ ಸಹಾಯ ಮಾಡಬೇಕು ಮತ್ತು ಭಿಕ್ಷಾಟನೆ ತೊಲಗಿಸಲು ಯೋಜನೆಗಳನ್ನು ಹಮ್ಮಿಕೊಳ್ಳಬೇಕು.

Friday, May 29, 2009

ಪರಿಸರ ಸ್ನೇಹಿ ಡೆಕಾಥ್ಲಾನ್


‘ಪರಿಸರ ಸ್ನೇಹಿ’ ಪರಿಸರ ಪ್ರತಿಕಾಳಜಿಯುಳ್ಳ ಪ್ರಜ್ಣಾವಂತರೆನಿಸಿಕೊಂಡವರು ಇತ್ತೀಚೆಗೆ ಚರ್ಚಿಸುತ್ತಿರುವ ವಿಷಯವಿದು. ಪರಿಸರಕ್ಕೆ ಪೂರಕವಾಗಿ, ಪರಿಸರ ಹಿತ ಕಾಪಾಡಿಕೊಂಡು ಜೀವನ ನಡೆಸುವುದೇ ಪರಿಸರ ಸ್ನೇಹಿ ಬದುಕು. ಈ ವಿಕಾಸ ಐ.ಬಿ.ಎಂ.ಆರ್ ಗೂ ತಲುಪಿದೆ.

ಇತ್ತೀಚೆಗೆ ವಿದ್ಯಾಭಾರತಿ ಪ್ರತಿಷ್ಟಾನದ ಇನಸ್ಟಿಟ್ಯೂಟ್ ಆಫ್ ಬ್ಯುಜಿನೆಸ್ ಮ್ಯಾನೇಜಮೆಂಟ್ ಅಂಡ ರೀಸರ್ಚ್ ಮೇ೧೨ ಮತ್ತು ಮೇ೧೩ರಂದು ಹುಬ್ಬಳ್ಳಿಯ ಟಿ.ಬಿ ರೇವಣಕರ್ ಕಲ್ಯಾಣಮಂಟಪದಲ್ಲಿ ಅಂತರ್ ಮಹಾವಿದ್ಯಾಲಯಗಳ ರಾಷ್ಟ್ರಮಟ್ಟದ ವ್ಯವಹಾರ ಅದ್ಯಯನ ಮೇಳ ‘ಡೆಕಾಥ್ಲಾನ್ ಮ್ಯಾನೇಜಮೆಂಟ್ ಫೆಸ್ಟ್-೨೦೦೯’ ಆಯೋಜಿಸಿತ್ತು. ಈ ಅದ್ಯಯನ ಮೇಳ ಪರಿಸರ ಸ್ನೇಹಿಯಾಗಿ ಜರುಗಿದ್ದು ವಿಶೇಷ, ಇಲ್ಲಿ ಹೆಚ್ಚು ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕೆಂದು ಐ.ಬಿ.ಎಂ.ಆರ್ ನ ವಿದ್ಯಾಧಿಕಾರಿ ಪಿ. ಎನ್. ಕಟಾವಕರ್ ರವರು ನಿರ್ಧರಿಸಿದ್ದರು.

ನಿಟ್ಟಿನಲ್ಲಿ ಪರಿಸರ ಸ್ನೇಹಿಯಾದ ‘ಹ್ಯಾಂಡ್ ಮೇಡ್ ಪೇಪರ್’ ತಯಾರಿಸುವ ತಾರಿಹಾಳದ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಕೀರ್ತಿ ಪೇಪರ್ ಕಾರ್ಖಾನೆಯಿಂದ ಡೆಕಾಥ್ಲಾನ್-೨೦೦೯ ಗೆ ಬೇಕಾಗುವ ಕಾಗದದ ಕೈ ಚೀಲ, ಕಡತಗಳು, ಗಿಫ್ಟ್ ಪ್ಯಾಕ್ ಖರೀದಿಸಲಾಗಿತ್ತು. ಇವು ನಿರುಪಯುಕ್ತ ವಸ್ತುಗಳನ್ನು ಪುನರ್ಬಳಕೆ ಮಾಡಿ ತಯಾರಿಸಿದಂತಹವು.

ವಿಜ್ಣಾನ, ಶಿಕ್ಷಣ ಕ್ಷೇತ್ರಗಳು ಬೆಳವಣಿಗೆ ಹೊಂದಿದಂತೆಲ್ಲಾ ಪರಿಸರ ವಿರೋಧಿ ಕಾರ್ಯಗಳು ಮತ್ತು ಪರಿಸರ ವಿರೋಧಿ ವಸ್ತುಗಳ ಬಳಕೆ ಹೆಚ್ಚುತ್ತ ನಡೆದಿವೆ. ಊಟಕ್ಕೆ ಉಪಯೋಗಿಸುವ ಪ್ಲೇಟ್, ಲೋಟಗಳಿಂದ ಹಿಡಿದು ದೇವರಿಗೆ ಅರ್ಪಿಸುವ ಹೂಗಳ ತನಕ ಎಲ್ಲವೂ ಪ್ಲಾಸ್ಟಿಕ್ ಮಯ. ಈ ಪ್ಲಾಸ್ಟಿಕ್ ವಸ್ತುಗಳು ಮಣ್ಣಿನಲ್ಲಿ, ಪರಿಸರದಲ್ಲಿ ಕೊಳೆಯುವ ಗುಣ ಹೊಂದಿಲ್ಲ. ಇದರಿಂದ ಎಷ್ಟೋ ವಿಷ ರಾಸಾಯನಿಕಗಳು ಮಣ್ಣಿಗೆ ಸೇರಿ ಫಲವತ್ತತೆ ಹಾಳುಗೆಡವುತ್ತಿವೆ.

ಪಟ್ಟಣಗಳಿಂದ ಹೊರ ಹೊಮ್ಮುವ ಇಂತಹ ಪರಿಸರ ವಿರೀಧಿ ವಸ್ತುಗಳನ್ನು ಶೇಕರಿಸಲು ನೂರಾರು ಎಕರೆ ಭೂಮಿಯೇ ಬೇಕಾಗುತ್ತದೆ. ಮುಂದೊಂದು ದಿನ ಮನುಷ್ಯನ ವಾಸಸ್ಥಳಕ್ಕಿಂತ ಇಂತಹ ತ್ಯಾಜ್ಯವಸ್ತುಗಳ ಸ್ಥಳವೇ ಹೆಚ್ಚಾಗುತ್ತದೆ. ಆದ್ದರಿಂದ ಆದಷ್ಟು ಪರಿಸರ ಸ್ನೇಹಿಯಾಗಿ ಬದುಕಬೇಕು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು. ಅಂದಾಗ ಪರಿಸರಕ್ಕೆ , ನಮ್ಮ ಜೀವನಕ್ಕೆ ಒಳಿತು ಮತ್ತು ನಮ್ಮ ಮುಂದಿನ ಪೀಳಿಗೆಗೂ ಬದುಕಲು ಯೋಗ್ಯವಾದ ಪರಿಸರವನ್ನು ನಾವು ನೀಡಿದಂತಾಗುತ್ತದೆ.

Tuesday, May 26, 2009

ಸಮ್ಯಕ ದರ್ಶನ


ಭಾಷಣ ಮಾಡುವ ಕಲೆ ಎಲ್ಲರಿಗೂ ಸಿದ್ಧಿಸಿರುವುದಿಲ್ಲ ಕೆಲವರಿಗೆ ಇದು ಹುಟ್ಟಿನಿಂದಲೇ ಬರುತ್ತದೆ. ಇನ್ನು ಕೆಲವರಿಗೆ ಸತತ ಪ್ರಯತ್ನದ ಫಲವಾಗಿ ಒಲಿದಿರುತ್ತದೆ. ಇಂತಹ ಕಲೆಯನ್ನು ತನ್ನ ಸತತ ಪ್ರಯತ್ನದಿಂದ ಮತ್ತು ಶಿಕ್ಷಕರ ನೆರವಿನಿಂದ ಕರಗತ ಮಾಡಿಕೊಂಡ ವಿದ್ಯಾರ್ಥಿ ಎ.ವಿ. ಪ್ರಸಾದ. ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗ ಅವರ ಗುರುಗಳು ಒತ್ತಾಯ ಮಾಡಿ ಭಾಷಣ, ಚರ್ಚಾ ಸ್ಪರ್ಧೆಗಳಿಗೆ ಭಾಗವಹಿಸಲು ಹೆಸರು ಸೇರಿಸುತ್ತಿದ್ದರು, ಅದೇ ಇಂದು ನನಗೆ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಪಡೆಯಲು ಕಾರಣವಾಗಿದೆ , ಎಂದು ಐ.ಬಿ.ಎಂ.ಆರ್ ಮಹಾವಿದ್ಯಾಲಯದ ಬಿ.ಸಿ.ಎ ವಿದ್ಯಾರ್ಥಿ ಎ.ವಿ.ಪ್ರಸಾದ್ ಹೇಳಿದರು.

ಕಳೆದ ಗುರುವಾರ ಮಾರ್ಚರಂದು ವಿದ್ಯಾಭಾರತಿ ಪ್ರತಿಷ್ಠಾನದ ಇನಸ್ಟಿಟ್ಯುಟ್ ಆಫ್ ಬ್ಯುಸಿನೆಸ್ ಮ್ಯಾನೇಜಮೆಂಟ್ ಆಂಡ ರಿಸರ್ಚ್ (ಐ.ಬಿ.ಎಂ.ಆರ್) ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡ ಎ.ವಿ ಪ್ರಸಾದ ನಮ್ಮ ಜೊತೆ ಅನುಭವವನ್ನು ಹಂಚಿಕೊಂಡದ್ದು ಹೀಗೆ. ನನಗೆ ಚಿಕ್ಕಂದಿನಿಂದ ಭಾಷಣ ಮಾಡುವ ಹವ್ಯಾಸ ಇದೆ, ನಾನು ೫ನೇ ತರಾತಿಯಲ್ಲಿ ಓದುತ್ತಿದ್ದಾಗ ಮೊದಲಬಾರಿಗೆ ಅಂತರ್ ಶಾಲಾ `ಪ್ರತಿಭಾ ಕಾರಂಜಿ'ಯಲ್ಲಿ `ದೂರದರ್ಶನದ ಒಳಿತು ಕೆಡುಕುಗಳು' ಎಂಬ ವಿಷಯದ ಮೇಲೆ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡೆ, ಜಿಲ್ಲಾಮಟ್ಟದಲ್ಲಿ ದ್ವಿತೀಯ ಬಾಹುಮಾನ ಪಡೆದಿದ್ದೇನೆ, ರಾಜ್ಯಮಟ್ಟದಲ್ಲಿ, ತಾಲೂಕ ಮಟ್ಟದಲ್ಲಿ ಭಾಗವಹಿಸಿದ್ದೇನೆ, ಚರ್ಚಾಸ್ಪರ್ಧೆಯಲ್ಲಿ `ಚಾಂಪಿಯನ್ ಶಿಪ್' ಪಡೆದಿದ್ದೇನೆ.

ನನಗೆ ಪುಸ್ತಕ, ಕಾದಂಬರಿ, ಪತ್ರಿಕೆಗಳನ್ನು ಓದುವುದೆಂದರೆ ತುಂಬ ಇಷ್ಟ. ನಾನು ವೇಳೆ ಸಿಕ್ಕಾಗೆಲ್ಲಾ ಗ್ರಂಥಾಲಯದಲ್ಲಿ ಕಳೆಯುತ್ತೇನೆ. ನನಗೆ ದೂರದರ್ಶನದಲ್ಲಿ ವಾರ್ತೆಗಳನ್ನು ಕೇಳುವ ಹವ್ಯಾಸವಿದೆ. ನಾನು ಪದವಿ ಮುಗಿಸಿದ ನಂತರ ಆಯ್.ಎ.ಎಸ್ ಮಾಡಬೇಕೆಂದುಕೊಂಡಿದ್ದೇನೆ. ಚರ್ಚಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಕ್ಕೆ ಏನೆನಿಸುತ್ತದೆ? ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ, `ಪ್ರಯತ್ನಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ', ಹಾಗೆ ನನಗೆ ಬಹುಮಾನ ಬಂದಿದೆ. ಒಂದು ಯಶಸ್ಸಿನ ಹಿಂದೆ ಒಬ್ಬ ಗುರುವಿನ ಮಾರ್ಗದರ್ಶನ ಇರುತ್ತದೆ. ಈ ಚರ್ಚಾಸ್ಪರ್ಧೆಗೆ ಸಂಬಂಧ ಪಟ್ಟ ವಿಷಯವನ್ನು ಸಂಗ್ರಹಿಸಲು ಪ್ರೊ.ಹರ್ಷವರ್ಧನ ಶೀಲವಂತ ಸಹಾಯ ಮಾಡಿದ್ದಾರೆ ಎಂದರು. ಇಷ್ಟೆಲ್ಲಾ ಹವ್ಯಾಸಗಳ ಮಧ್ಯೆಯೂ ಪ್ರಸಾದ ತನ್ನ ವ್ಯಾಸಾಂಗದಲ್ಲಿ ಹಿಂದೆ ಬಿದ್ದಿಲ್ಲ. ಮನಸಿದ್ದರೆ ಮಾರ್ಗ ಎಂಬಂತೆ ಪ್ರತಿ ಕೆಲಸದಲ್ಲಿ ಆಸಕ್ತಿ ಇದ್ದರೆ ಯಶಸ್ಸು ಖಂಡಿತ.

ಡೆಕಾಥ್ಲಾನ್ ಮ್ಯಾನೇಜಮೆಂಟ್ ಫೆಸ್ಟ್-೨೦೦೯


ಆಕಾಶದಲ್ಲಿ ನಕ್ಷತ್ರಗಳ ಹಾಗೆ ಪಳ ಪಳನೆ ಚುರುಕಿನಿಂದ ಹೊಳೆಯುತ್ತ, ಹುಮ್ಮಸ್ಸಿನಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಲವಾರು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಂಭ್ರಮಿಸಲು ಐಬಿಎಂಆರ್ ಒಂದು ವೇಧಿಕೆಯನ್ನು ಕಲ್ಪಿಸಿಕೊಟ್ಟಿತ್ತು , ಅದೇ ಡೆಕಾಥ್ಲಾನ್ ಮ್ಯಾನೇಜಮೆಂಟ್ ಫೆಸ್ಟ್-೨೦೦೯.



ಮೇ ೧೨, ೨೦೦೯ ಮತ್ತು ಮೇ೧೩ ೨೦೦೯ ರಂದು ರಾಷ್ಟ್ರಮಟ್ಟದ ಅಧ್ಯಯನ ಮೇಳವನ್ನು ಐಬಿಎಂಆರ್ ಹುಬ್ಬಳ್ಳಿಯ ಟಿ.ಬಿ ರೇವಣಕರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿತ್ತು. ಡೆಕಾಥ್ಲಾನ್ ಮ್ಯಾನೇಜಮೆಂಟ್ ಫೆಸ್ಟ್-೨೦೦೯ ಯಶಸ್ವಿಯಾಗಲು ವಿದ್ಯಾರ್ಥಿಗಳ ಪಾತ್ರ ಬಹು ದೊಡ್ಡದು. ನಿರೂಪಣೆಯಿಂದ ಹಿಡಿದು ಪ್ರೆಸ್ ನೋಟ್ಸ್ ಮುಟ್ಟಿಸುವತನಕ ವಿದ್ಯಾರ್ಥಿಗಳದೆ ಕಸರತ್ತು. ನಾನು ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದರಿಂದ ಇದು ನನಗೆ ಒಂದು ಒಳ್ಳೆಯ ಅನುಭವ.



ಅದ್ಯಯನ ಮೇಳ ಎಂಬಿಎ ವಿದ್ಯರ್ಥಿಗಳಿಗೆ ಮೀಸಲಿದ್ದರೂ ಅಲ್ಲಿಯ ಜವಾಬ್ಧಾರಿಯನ್ನು ನಮಗೂ ಅಂದರೆ ಪತ್ರಿಕೋದ್ಯಮದ ವಿದ್ಯರ್ಥಿಗಳಿಗೂ ವಹಿಸಲಾಗಿತ್ತು. ನಮ್ಮ ಗುರುಗಳಾದ ಹರ್ಷವರ್ಧನ ಶೀಲವಂತ ಅವರು ನಮ್ಮನ್ನು ಎರೆಡು ಗುಂಪುಗಳಾಗಿ ವಿಂಗಡಿಸಿ ನಮಗೆ ಎರೆಡು ದಿನದ ವೇಳಾ ಪಟ್ಟಿಯನ್ನು ಹಾಕಿಕೊಟ್ಟಿದ್ದರು. ಈ ಎರೆಡು ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳ ಫೊಟೋ ತೆಗೆಯುವುದು, ವಿಡಿಯೋ ಮಾಡುವುದು ಮತ್ತು ವರಧಿ ಮಾಡಿ ದಿನ ಪತ್ರಿಕೆಗಳಿಗೆ ಕಳಿಸುವ ಜವಾಬ್ಧಾರಿಯನ್ನು ನಮ್ಮ ಮೇಲೆಯೆ ಬಿಟ್ಟಿದ್ದರು.



ಇನ್ನೊಂದು ಮುಕ್ಯವಾದ ವಿಷಯವೆಂದರೆ ನಾವು ನಮ್ಮ ಐಎಂಸಿಆರ್ ಮಹಾವಿದ್ಯಾಲಯದಲ್ಲಿ ಹರ್ಷವರ್ಧನ ಶೀಲವಂತ ಗುರುಗಳ ಮಾರ್ಗದರ್ಶನದಲ್ಲಿ ದೃಷ್ಟಿ ಸೃಷ್ಟಿ ಎಂಬ ಪತ್ರಿಕೆಯನ್ನು ತರುತ್ತಿದ್ದೇವೆ. ಅದರಂತೆ ಈ ಎರೆಡು ದಿನದ ಡೆಕಾಥ್ಲಾನ್ ಅದ್ಯಯನ ಮೇಳದ ಪ್ರಯುಕ್ತ ದಿನಕ್ಕೊಂದರಂತೆ ಅಂದು ನಡೆಯುವ ಕಾರ್ಯಕ್ರಮಗಳ ವರಧಿಯನ್ನು ಆ ದೃಷ್ಟಿ ಸೃಷ್ಟಿ ಪತ್ರಿಕೆಯಲ್ಲಿ ತರಬೇಕಾಗಿತ್ತು. ನಾವೆಲ್ಲ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಪ್ರತಿ ಕೆಲಸವನ್ನು ಹಂಚಿಕೊಂಡಿದ್ದೆವು. ಅದರಂತೆ ನಮ್ಮ ತಂಡದವರು ಫೊಟೋ, ವಿಡಿಯೋ ಮತ್ತು ವರಧಿ ಮಾಡುವ ಕೆಲಸವನ್ನು ಒಪ್ಪಿಕೊಂಡಿದ್ದೆವು. ವೇಧಿಕೆಯ ಮೇಲೆ ಹೋಗಿ ವಿಡಿಯೋ ಮಾಡುವಾಗಂತು ರೋಮಾಂಚಣವಾದಂತೆ ಅನುಭವ. ಇನ್ನೊಂದು ತಂಡ ಪೇಜ್ ಎಡಿಟಿಂಗ್ ಮಾಡಿದರು, ಅಂತೂ ಮೊದಲ ದಿನದ ಪತ್ರಿಕೆ ಹೊರಗೆ ಬಂತು.



ಮೊದಲ ಪತ್ರಿಕೆಯಲ್ಲಿ ಮೇ ೧೨ ರಂದು ನಡೆದ ಉದ್ಘಾಟನಾ ಸಮಾರಂಭ, ಐಸ್ ಬ್ರೇಕಿಂಗ್, ಬ್ಯುಜಿನೆಸ್ ಕ್ವಿಜ್, ಮಾರ್ಕೆಟಿಂಗ್, ಫೈನಾನ್ಸ್, ಪೇಪರ್ ಪ್ರಸಂಟೇಶನ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವರಧಿ ಮತ್ತು ಫೊಟೋಗಳನ್ನು ಹಾಕಲಾಗಿತ್ತು. ಕುಷಿ ಕುಷಿಯಿಂದ ಮೊದಲ ಪತ್ರಿಕೆಗಳನ್ನು ಡೆಕಾಥ್ಲಾನಗೆ ಆಗಮಿಸಿದ್ದ ವಿವಿಧ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹಂಚಿದೆವು ಮತ್ತು ಅವರಿಂದ ಮೆಚ್ಚುಗೆಯ ಮಾತನ್ನು ಗಿಟ್ಟಿಸಿಕೊಂಡೆವು. ಸಂತಸದಲ್ಲೆ ಮರುದಿನ ಪತ್ರಿಕೆಯನ್ನು ಹೊರತರಲು ಸಿದ್ದವಾದೆವು. ಅಷ್ಟರಲ್ಲೆ ಕಂಪ್ಯೂಟರ್ ಸರ್ ದೀಪಕ್ ಅವರು ಮತ್ತೊಂದು ಪತ್ರಿಕೆಯನ್ನು ತರಬೇಕು ಅದು ಡೆಡ್ ಲೈನ್ ಒಳಗಾಗಿ ಎಂದರು. ಈ ಪತ್ರಿಕೆಯನ್ನು ಎರೆಡು ತಂಡಗಳು ಕೂಡಿ ಮಾಡಿದೆವು.



ಮತ್ತೆ ನಮ್ಮ ಮೂರನೇ ಪತ್ರಿಕೆಯನ್ನು ತರಲು ಗುದ್ದಾಡಿದೆವು. ನಮ್ಮ ದುರದೃಷ್ಟವೆಂಬಂತೆ ವಿದ್ಯುತ್ ಕೈಕೊಟ್ಟಿತು. ಆದರು ದೃತಿಗೆಡದೆ ಎಲ್ಲರು ಕೂಡಿ ಕರೆಂಟ್ ಬಂದ ಮೇಲೆ ಕೆಲಸ ಪ್ರಾರಂಭ ಮಾಡಿದೆವಾದರು ಅಂದು ಆ ಪತ್ರಿಕೆ ಬರಲೇಯಿಲ್ಲಾ. ಮನಸ್ಸಿಗೆ ಬಹಳ ನೋವಾದರೂ ಡೆಡ್ ಲೈನ್ ಮಹತ್ವ ಅಂದು ಮನದಟ್ಟಾಯಿತು. ಎಷ್ಟೇ ಕಹಿ ಅನುಭವಗಳಾದರೂ ಡೆಕಾಥ್ಲಾನ್ ನಮ್ಮ ಒಗ್ಗಟ್ಟಿನ ಬಗ್ಗೆ ಮತ್ತು ಆ ಕೆಲಸದ ಬಗ್ಗೆ ತೃಪ್ತಿಯನ್ನು ಕೊಟ್ಟಿತು. ಹರ್ಷ ಸರ್ ಹೊಗಳಿಕೆಯಂತೂ ನಮಗೆ ಬಹಳ ಹರ್ಷ ತಂದಿತು. ಇದರಿಂದ ನಮ್ಮ ಆತ್ಮ ವಿಶ್ವಾಸವೂ ಹೆಚ್ಚಿತು.