Sunday, November 8, 2009

ಮೊಬೈಲ್ ಅಲೆಯಲ್ಲಿ ಎಸ್.ಟಿ.ಡಿ ಬೂತ್ ಗಳ ರೋಧನೆ

"ಯಾರೇ ಕೂಗಾಡಲಿ ಯಾರೇ ಚೀರಾಡಲಿ ಎಸ್.ಟಿ.ಡಿ ಬೂತ್ ನನಗೆ ಸಾಟಿಯಿಲ್ಲ" ಎಂದು ಮೊಬೈಲ್ ಗಳು ಬೀಗುತ್ತಿದ್ದರೆ, ಈ ಮೊಬೈಲ್ ಬಳಕೆಯಿಂದ ನಾವು ಅನಾತರಾಗುತ್ತಿದ್ದೇವೆ, ನಮ್ಮನ್ನು ಯಾರು ಮಾತನಾಡಿಸುವವರೇ ಇಲ್ಲ ಎಂದು ಎಸ್.ಟಿ.ಡಿ ಬೂತ್ ಗಳು ಗೋಳಿಡುತ್ತಿವೆ.

ನಿಜ ಇಂದಿನ ದಿನ ಮೊಬೈಲ್ ಗಳ ಅತಿಯಾದ ಬಳಕೆಯಿಂದ ಎಸ್.ಟಿ.ಡಿ ಬೂತ್ ಗಳು ಅನಾತವಾಗುತ್ತಿವೆ. ಪ್ರತಿಯೊಬ್ಬರು ಮೊಬೈಲ್ ಪ್ರೀಯರಾಗಿದ್ದಾರೆ. ಹಿಂದೆಲ್ಲ ಎಸ್.ಟಿ.ಡಿ ಬೂತ್ ಗಳೆಂದರೆ ಎಲ್ಲರಿಗೂ ಬಹಳ ಗೌರವ ಮತ್ತು ಪ್ರೀತಿ, ಏಕೆಂದರೆ ಮೊಬೈಲಗಳು ಬೆಳಕಿಗೆ ಬರುವುದಕ್ಕಿಂತ ಮುಂಚೆ ದೂರ ಸಂಪರ್ಕಕ್ಕೆ ಈ ಎಸ್.ಟಿ.ಡಿ ಬೂತ್ ಗಳೇ ಆಧಾರವಾಗಿದ್ದವು.

ದೂರದಲ್ಲಿದ್ದ ತಂದೆ- ತಾಯಿಯ ಜೊತೆ, ಅಕ್ಕ- ಅಣ್ಣನ್ ಜೊತೆ, ಪ್ರಿಯತಮ- ಪ್ರಿಯತಮೆಯ ಜೊತೆ ಸಂವಹನ ಮಾಡಲು ಈ ಎಸ್.ಟಿ.ಡಿ ದೂರ ಸಂಪರ್ಕ ಮಾದ್ಯಮವೇ ಸಹಕಾರಿಯಾಗಿತ್ತು. ಒಂದು ಕರೆಗೆ ೨ರಿಂದ ೩ ರೂ ದರವಿದ್ದರೂ ಲೆಕ್ಕಿಸದೇ ಜನ ಮಾತನಾಡುತ್ತಿದ್ದ ಕಾಲವದು. ಬೂತ್ ಗಳ ಹೊರಗೆ ಸಾಲು ಸಾಲು ಜನ ಕರೆ ಮಾಡಲು ಕಾಯುತ್ತಿದ್ದರು.

ಆದರೆ ಇಂದು ಆ ಎಸ್.ಟಿ.ಡಿ ಬೂತ್ ಗಳತ್ತ ತಲೆ ಹಾಕಿ ನೋಡುವವರೇ ಇಲ್ಲದಂತಾಗಿದೆ. ಇಂದಿನ ದಿನ ಅಗ್ಗ ದರದಲ್ಲಿ ಲಭ್ಯವಿರುವ ಮೊಬೈಲ್ ಗಳು, ಕಡಿಮೆ ದರದ ಕರೆಗಳು, ಉಚಿತ ಸಿಮ್ ಕಾರ್ಡಗಳು ಹೀಗೆ ಒಂದರ ಮೇಲೊಂದರಂತೆ ಸೌಲಭ್ಯಗಳು ಜನರಿಗೆ ಲಭ್ಯವಿರುವಾಗ ಎಸ್.ಟಿ.ಡಿ ಬೂತ್ ಗಳತ್ತ ಯಾರು ಹೋಗ್ತಾರೆ ಅಲ್ಲವೇ!

ಹಾಗಂತ ಎಸ್.ಟಿ.ಡಿ ಬೂತ್ ಗಳು ಮೊದಲಿನಂತೆ ದುಬಾರಿ ಇಲ್ಲ ಅವುಗಳಲ್ಲೂ ಹಲವಾರು ಬದಲಾವಣೆಗಳಾಗಿವೆ. ಕರೆಗಳ ದರದಲ್ಲಿ ಇಳಿಕೆಯಾಗಿದೆ. ಒಂದು ಕರೆಗೆ ೩ ರೂ ತನಕ ಇದ್ದ, ದರವನ್ನು ೧ರಿಂದ ೫೦ ಪೈಸೆಯ ತನಕ ಕಡಿಮೆ ಮಾಡಿ ಮೊಬೈಲ್ ಪ್ರತಿ ಸ್ಪರ್ಧಿಯಾಗಿ ನಿಂತಿದೆ.

ಆದರೆ ಇಂದಿನ ವೇಗಗತಿಯಲ್ಲಿ ಬೆಳೆಯುತ್ತಿರುವ ಕಾಲದಲ್ಲಿ ಜನರಿಗೆ ಎಸ್.ಟಿ.ಡಿ ಬೂತ್ ಗಳಲ್ಲಿ ನಿಂತು ಮಾತನಾಡುವಷ್ಟು ಸಮಯ ಇಲ್ಲದಂತಾಗಿದೆ. ಕೆಲಸದ ಜೊತೆಗೇ ದೂರವಾಣಿಯಲ್ಲಿ ಮಾತನಾಡಬೇಕೆಂಬುದು ಜನರ ಬೇಡಿಕೆ ಮತ್ತು ಆಶಯ. ಅದಕ್ಕೆ ತಕ್ಕಂತೆ ಮೊಬೈಲ್ ಗಳು ಇಂದು ಜನರಿಗೆ ಲಭ್ಯ ಇವೆ, ಯಾವುದೇ ಕೆಲಸ ಮಾಡುವಾಗಲೂ ಮೊಬೈಲ್ ನಲ್ಲಿ ಮಾತನಾಡಬಹುದಾಗಿದೆ. ಒಟ್ಟಿನಲ್ಲಿ ದೂರ ಸಂಪರ್ಕ ಸಾಧನಗಳ ಸ್ಪರ್ಧೆಯಲ್ಲಿ ಮೊಬೈಲ್ ಗಿಂತ ಎಸ್.ಟಿ.ಡಿ ಬೂತ್ ಹಿನ್ನಡೆ ಸಾಧಿಸಿದ್ದಂತು ನಿಜ.

ಎಷ್ಟೇ ಸೌಲಭ್ಯಗಳಿದ್ದರೂ ಎಸ್.ಟಿ.ಡಿ ಬೂತ್ ಗಳಷ್ಟು ನೆಮ್ಮದಿ ಮೊಬೈಲ್ ಗಳಲಿಲ್ಲ. ಏಕೆಂದರೆ ಬೂತ್ ಗಳಲ್ಲಿ ಮಾತನಾಡುತ್ತಿರುವಾಗ ಇನ್ನೊಬ್ಬರಿಗೆ ತೊಂದರೆಯಾಗಲೀ, ಕಿರುಕುಳವಾಗಲೀ ಇರುತ್ತಿರಲಿಲ್ಲ. ಆದರೆ ಇಂದು ಈ ಮೊಬೈಲ್ ಗಳದ್ದು ದೊಡ್ಡ ಕಿರಿಕಿರಿ. ಪಕ್ಕದಲ್ಲಿರುವವರಿಗೆ ತೊಂದರೆಯಾಗುತ್ತದೆ ಎಂದು ಲೆಕ್ಕಿಸದೇ ಮೊಬೈಲ್ ನಲ್ಲಿ ವಿಚಿತ್ರವಾಗಿ ಮಾತನಾಡುತ್ತಿರುವವರನ್ನು ಕಾಣಬಹುದು.

ದೇವಸ್ಥಾನದಲ್ಲಿದ್ದಾಗ, ಬಸ್ ನಿಲ್ಧಾಣದಲ್ಲಿದ್ದಾಗ, ವಾಹನಗಳನ್ನು ಓಡಿಸುತ್ತಿರುವಾಗ ತಾವು ಎಲ್ಲಿ ಇರುವರು ಎಂಬುದನ್ನು ಕೂಡ ಲೆಕ್ಕಿಸದೆ ಮೊಬೈಲ್ ಗಳಲ್ಲಿ ಮಾತನಾಡುವ ಜನರ ವರ್ತನೆ ಬಹಳ ವಿಚಿತ್ರ!

ಅತಿಯಾದ ಮೊಬೈಲ್ ಬಳಕೆಯಿಂದ ಹಲವಾರು ಅಪಘಾತಗಳಾಗುತ್ತಿರುವುದು ಇಂದಿನ ದಿನ ಹೆಚ್ಚಾಗಿದೆ. ಇತ್ತೀಚೆಗೆ ಮೊಬೈಲ್ ನಲ್ಲಿ ಮಾತನಾಡುತ್ತ ರೈಲ್ವೆಗೆ ಸಿಕ್ಕು ಸಾವನ್ನಪ್ಪಿದ ಮಹಿಳೆಯ ವರದಿಯನ್ನು ದಿನ ಪತ್ರಿಕೆಯಲ್ಲಿ ನೋಡಿದಾಗ ಮೊಬೈಲ್ ಗಳ ದುಷ್ಪರಿಣಾಮ ಎಷ್ಟು ಎಂಬುದು ತಿಳಿಯುತ್ತದೆ.

ಒಟ್ಟಿನಲ್ಲಿ ಮೊಬೈಲನ್ನು ಅವಶ್ಯಕತೆಗೆ ತಕ್ಕಂತೆ, ಇನ್ನೊಬ್ಬರಿಗೆ ತೊಂದರೆಯಾಗದಂತೆ ಬಳಸುವುದು ಒಳ್ಳೆಯದು.