Wednesday, June 10, 2009
ಮಹಾವಿದ್ಯಾಲಯದಲ್ಲೊದು ಪ್ರಾಯೋಗಿಕ ಚಿತ್ರೀಕರಣ
Tuesday, June 9, 2009
ಜಾತಿಯ ಆಧಾರದ ಮೇಲಿನ ಮೀಸಲಾತಿ ಬೇಡ!
ನಮ್ಮ ಸಮಾಜದಲ್ಲಿ ಹಿಂದೆ ಮೇಲ್ಜಾತಿಯವರು ಕೆಳಜಾತಿಯವರನ್ನು ಶೋಷನೆ ಮಾಡುತ್ತಿದ್ದನ್ನು ನಾವು ಇತಿಹಾಸದ ಮುಖಾಂತರ ತಿಳಿಯಬಹುದು. ಕೆಳಜಾತಿಯವರು ಯಾವುದೇ ಅನುಕೂಲಗಳನ್ನು ಹೊಂದದೆ, ಎಲ್ಲ ಅನೂಕೂಲತೆಗಳು ಮೇಲ್ಜಾತಿಯವರಿಗೆ ಮೀಸಲಿದ್ದವು ಎಂದರೆ ತಪ್ಪಾಗಲಾರದು. ಆ ಕಾರಣದಿಂದ ಸ್ವತಂತ್ರ್ಯ ನಂತರ ಸಂವಿಧಾನ ರಚಿಸುವಾಗ ಹಿಂದುಳಿದ ಜಾತಿ , ವರ್ಗದವರಿಗೆ ಅನುಕೂಲವಾಗಲೆಂದು ಮೀಸಲಾತಿ ಪದ್ಧತಿಯನ್ನು ಹೊರಡಿಸಿದರು.
ಆದರೆ ಇಂದಿನ ದಿನ ಮೊದಲಿನಂತೆ ಜಾತಿ, ಮೇಲು-ಕೀಳು, ಭೇದ-ಭಾವಗಳೆಂಬ ಅನಿಷ್ಟ ಪದ್ಧತಿಗಳು ಕಡಿಮೆಯಾಗಿವೆ ಎನ್ನಬಹುದು. ಸಮಾಜದಲ್ಲಿ ಸಮಾನತೆ ಕಾಣುತ್ತಿದೆ, ಇನ್ನುಮುಂದೆ ಮೀಸಲಾತಿ ಪದ್ಧತಿ ಅಷ್ಟೊಂದು ಅವಶ್ಯಕವಲ್ಲ ಎನ್ನಬಹುದು. ಏಕೆಂದರೆ ಇಂದಿನ ದಿನ ನಮ್ಮ ಸಮಾಜದಲ್ಲಿ ಮೇಲ್ಜಾತಿಯ ಎಷ್ಟೋ ಜನರು ಒಂದು ಹೊತ್ತಿಗೂ ಪರದಾಡುವ, ದಿನಗೂಲಿ ಮಾಡಿ ಜೀವನ ನಡೆಸುವವರನ್ನು ನಾವು ಕಾಣಬಹುದು. ಹಾಗಂತ ಈ ಮೀಸಲಾತಿ ಪದ್ಧತಿಯನ್ನೇ ನಿಲ್ಲಿಸಬೇಕೆಂದು ಹೇಳಲಾಗದು ಆದರೆ ಜಾತಿ ಆಧಾರದ ಮೇಲಿನ ಮೀಸಲಾತಿ ಬೇಡ.
ಮೇಲ್ಜಾತಿಯ ಜನರೆಲ್ಲರು ಶ್ರೀಮಂತರು, ಕೆಳಜಾತಿಯಲ್ಲಿ ಹುಟ್ಟಿದವರೆಲ್ಲರೂ ಬಡವರು ಎನ್ನಲ್ಲಾಗದು. ಎಷ್ಟೋ ಜನ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೋಡಿಸಲಾಗದೆ ಕೂಲಿ ಕೆಲಸಕ್ಕೆ ಕಳಿಸುತ್ತಾರೆ. ಇಂತವರಿಗೂ ಈ ಮೀಸಲಾತಿ ನ್ಯಾಯ ಒದಗಿಸಿಕೊಡಬೇಕಲ್ಲವೇ! ಆದ್ದರಿಂದ ಸರಕಾರ ಜಾತಿಯ ಮೇಲಿನ ಮೀಸಲಾತಿ ನಿಲ್ಲಿಸಿ ವ್ಯಕ್ತಿಯ ಆರ್ಥಿಕತೆಯ ಆಧಾರದ ಮೇಲಿನ ಮೀಸಲಾತಿಯನ್ನು ಹೊರಡಿಸಬೇಕು. ಅಂದಾಗ ಸಮಾಜದಲ್ಲಿನ ಭೇದ- ಭಾವ, ಮೇಲುಕೀಳು ನಿಲ್ಲುತ್ತದೆ. ದೈ
Monday, June 8, 2009
ಕುಂಬಾರಿಕೆ
ಕುಂಬಾರಿಕೆ ಮಾಡುದರಿಂದ ಏನು ಲಾಬಾನೇ ಇಲ್ಲಾ, ಅದು ನಮ್ಮ ಅಪ್ಪನ ಕಾಲಕ್ಕೆ ಮುಗೀತು ಹೀಗಂತ ಹೇಳಿದ್ದು ಯಲ್ಲಪ್ಪ ಕುಂಬಾರ. ನಮ್ಮ ಮನೆಯ ಮುಂದೆ ಯೆಲ್ಲಪ್ಪನ ಮನೆ ಇದೆ, ನಾವು ಸಣ್ಣವರಿದ್ದಾಗ ಯಲ್ಲಪ್ಪ ತನ್ನ ಅಪ್ಪನ ಜೊತೆ ಗಡಿಗೆ ತಯಾರಿಸುತ್ತಿದ್ದ. ಆದರೆ ಈಗ ಅದನ್ನು ಬಿಟ್ಟು ಪಂಚರ್ ಅಂಗಡಿ ಹಾಕಿಕೊಂಡಿದ್ದಾನೆ.
ಅವನಿಗೆ ಕುಂಬಾರಿಕೆ ಮಾಡಲು ಇಷ್ಟ ಆದ
ರೆ ಅದರಿಂದ ಮನೆತನ ಸಾಗುವುದಿಲ್ಲವಲ್ಲ. ಆದರೂ ಯೆಲ್ಲಪ್ಪ ಆವಾಗಾವಾಗ ಮಣ್ಣಿನ ಒಲೆಗಳನ್ನು ಬೇರೆ ಕಡೆಯಿಂದ ತಂದು ಮಾರಾಟ ಮಾಡುತ್ತಾನೆ, ಆದರೆ ಅವನೇ ತಯಾರಿಸುವುದಿಲ್ಲ. ಇದಕ್ಕೆ ಕಾರಣ ಆಧುನಿಕರಣ ಎನ್ನಬಹುದು.
ಇಂದಿನ ದಿನ ಗಡಿಗೆಗಳ ಬಳಕೆಯನ್ನು ಜನರು ಕಡಿಮೆ ಮಾಡಿದ್ದಾರೆ ಅಥವಾ ನಿಲ್ಲಿಸಿಯೇ ಬಿಟ್ಟಿದ್ದಾರೆ ಅಂದರೆ ತಪ್ಪಾಗಲಾರದು. ಈ ಕಾರಣದಿಂದ ಮೊದಲಿನಿಂದ ಗಡಿಗೆ ತಯಾರಿಸುತ್ತ ಬಂದವರು ಅದನ್ನು ಬಿಟ್ಟು ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮೊದಲು ಅಡುಗೆ ಮಾಡುವುದಕ್ಕೆ, ನೀರು ಶೇಕರಿಸುವುದಕ್ಕೆ ಪ್ರತಿಯೊಂದಕ್ಕೂ ಮಣ್ಣಿನಿಂದ ತಯಾರ ಮಾಡಿದ ಗಡಿಗೆಗಳನ್ನೇ ಉಪಯೋಗಿಸುತ್ತಿದ್ದರು. ಈ ಮಣ್ಣಿನ ಗಡಿಗೆಗಳು ಆರೋಗ್ಯಕ್ಕೂ ಓಳ್ಳೆಯದು. ಈ ಗಡಿಗೆಗಳನ್ನ ಬಡವರ ಫ್ರಿಜ್ ಎನ್ನುತ್ತಾರೆ.
ಇಂತಹ ಕುಂಬಾರಿಕೆ ಮಾಡುವವರನ್ನು ವುಳಿಸಿ ಬೆಳೆಸುವದು ಅವಶ್ಯಕವಾಗಿದೆ. ಸರಕಾರ ಇವರಿಗೆ ಆರ್ಥಿಕವಾಗಿ ಬಲಿಷ್ಟರನ್ನಾಗಿಸಬೇಕು.
ಶುದ್ಧವಾಗಿರಲಿ ಈ ಜನಪದ
ಹಿಂದಿನ ಜನಪದ ಹಾಡುಗಳು ಕೇಳಲು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಲು ಸೂಕ್ತವಾಗಿದ್ದವು. ಆದರೆ ಇಂದಿನ ಕೆಲ ಜನಪದ ಹಾಡುಗಳು ವಿಚಿತ್ರ ಮತ್ತು ತಿಳಿಯಲಂತು ಅಸಹ್ಯಕರ. ಇಂದಿನ ಕೆಲ ಜನಪದಗಳು ಅಶ್ಲೀಲತೆಯ ಜಾಡ ಹಿಡಿದು ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ನನ್ನ ಹಳ್ಳಿಯಲ್ಲಿ ಒಬ್ಬ ಹಿರಿಯ ವ್ಯಕ್ತಿ ಇಂದಿನ ಜನಪದ ಹಾಡುಗಳ ಬಗ್ಗೆ ಹೇಳಿದ ಮಾತು ನೆನಪಿಗೆ ಬರುತ್ತದೆ, ‘ಮಂದ್ಯಾಗ ಕೇಳಿದ್ರ ಮರ್ಯಾದಿ ತಕ್ಕೊಂಡ ಹೋಗುದ ಇಂತಾ ಹಾಡ’ ಈ ಹಿರಿಯನ ಭಾವನೆ ಒಂದು ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸುವಂತದ್ದು.
ಹಳ್ಳಿಗಳಲ್ಲಿ ಇದರ ಹಾವಳಿ ಹೆಚ್ಚು, ಟ್ರ್ಯಾಕ್ಟರ್(ವಾಹನ) ಗಳಲ್ಲಿ ಇಂತಹ ಅಶ್ಲೀಲ ಹಾಡುಗಳನ್ನು ಹಾಕ್ಕೊಂಡು ಹೊಂಟ್ರಂದ್ರ ಮನಿ ಬಾಕಲದಾಗ ನಿಂತ ಹೆಣ್ಣು ಮಕ್ಕಳು ಮನಿ ಒಳಗ ಹೊಗುತ್ತಾರೆ. ಅಂತಹ ಅವಮರ್ಯಾದೆಯನ್ನು ಇಂದಿನ ಕೆಲ ಜನಪದ ಹಾಡುಗಳು ಸೃಷ್ಟಿ ಮಾಡುತ್ತಿವೆ. ನಮ್ಮ ಸಂಸ್ಕೃತಿಯಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಸಮಾಜದ ಹಿತ ದೃಷ್ಟಿಯಿಂದ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿರುವುದು ಒಂದು ಸದುದ್ದೇಶದಿಂದ. ಆದರೆ ಇಂದಿನ ದಿನ ಸಣ್ಣ ಹುಡುಗನ ಬಾಯಲ್ಲಿ ಅಶ್ಲೀಲತೆಯ ಅಬ್ಬರ. ಇದಕ್ಕೆ ಕಾರಣ ಇಂತಹ ಅಶ್ಲೀಲ ಗೀತೆಗಳು ಎಂದರೆ ತಪ್ಪಾಗಲಾರದು.
ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು. ಎಂಬ ಬಸವಣ್ಣನವರ ವಚನದ ಅನುಕರಣೆ ಅವಶ್ಯಕ. ಸಮಾಜದ ಉದ್ಧಾರಕ್ಕಾಗಿ ಜನಪದ ವಾಗಬೇಕೆ ವಿನಹ ಮಾರಕಕ್ಕಾಗಬಾರದು. ಇಂತಹ ಅಶ್ಲೀಲ ಜನಪದಗಳು ವ್ಯಕ್ತಿಯ ವ್ಯಕ್ತಿತ್ವವನ್ನೇ ನಾಶ ಮಾಡುತ್ತವೆ, ಇನ್ನು ಮಕ್ಕಳ ಮನಸ್ಸಿನ ಮೇಲೆ ಇಂತಹ ಜನಪದ ಹಾಡುಗಳು ತೀವ್ರ ಪರಿಣಾಮ ಬೀರುತ್ತಿವೆ. ಆದ್ದರಿಂದ ಇಂತಹ ಅಶ್ಲೀಲ ಜನಪದಗಳ ಬಳಕೆ ನಿಲ್ಲಬೇಕು. ಸಾರ್ವಜನಿಕರು ಇದರ ಮೇಲೆ ನಿರ್ಭಂದನೆಗಳನ್ನು ಹೇರಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಹಾಡುಗಳನ್ನು ಕಾಣದಂತೆ ಮಾಡಬೇಕು.
Friday, June 5, 2009
ಹಿರಿಯರ ಮೌಲ್ಯಗಳಿಂದ ಯುವಕರ ವ್ಯಕ್ತಿತ್ವ ಸುಧಾರಣೆ ಸಾಧ್ಯ
ಯುವಕರಿಂದಲೇ ದೇಶದ ಸುಧಾರಣೆ ಸಾಧ್ಯ ಎಂದು ಹಿರಿಯರು ಹೇಳುವಂತೆ, ದೇಶದ ಸುಧಾರಣೆಗೆ ಯುವಕರ ಪಾತ್ರ ಅವಶ್ಯಕವಾಗಿದೆ. ಆದರೆ ಇಂದಿನ ಕೆಲವೊಂದು ಘಟನೆಗಳನ್ನು ನೋಡಿದರೆ ದೇಶದ ಮಾರಕಕ್ಕೆ ಯುವಕರ ಕ್ರೂರ ಕೃತ್ಯಗಳು ಕಾರಣವಾಗುತ್ತಿವೆ. ಭಯೋತ್ಪಾದನೆ, ಕೊಲೆ- ಸುಲಿಗೆ, ಅಂದಾನುಕರಣೆ, ಹೀಗೆ ಹಲವಾರು ಕೃತ್ಯಗಳಲ್ಲಿ ಯುವಕರು ತೊಡಗುತ್ತಿರುವುದು ಇಂದಿನ ದಿನ ಸರ್ವೇ ಸಾಮಾನ್ಯವಾಗಿದೆ.
ಸಾರ್ವಜಿಕ ಸ್ಥಳಗಳಾದ ಹೊಟೇಲ್, ಬಸ್ ಸ್ಟ್ಯಾಂಡ, ಪಾರ್ಕ್, ಸಭೆ ಸಮಾರಂಭಗಳಲ್ಲಿ ಯುವಕರ ವರ್ತನೆ ತುಂಬ ವಿಚಿತ್ರವಾಗಿರುತ್ತದೆ. ಈ ವಿಚಿತ್ರ ವರ್ತನೆ ಉಳಿದವರ ಮನಸ್ಸಿಗೆ ನೋವಾಗುವಂತೆ ಮಾಡುತ್ತದೆ. ಇಂತಹ ವರ್ತನೆಗಳಿಗೆ ಹಲವಾರು ಕಾರಣಗಳಿವೆ. ಮುಖ್ಯ ಕಾರಣವೆಂದರೆ ಮಾರ್ಗದರ್ಶನದ ಕೊರತೆ ಮತ್ತು ಹಿರಿಯರ ಮೌಲ್ಯಗಳಿಂದ ವಂಚಿತರಾಗುಳಿಯುವುದು. ಮೊದಲು ಒಂದು ಮಗು ಜನಿಸಿದ ನಂತರ ಅದರ ಬೆಳವಣಿಗೆಗೆ ಬೇಕಾದ ಒಳ್ಳೆಯ ವಾತಾವರಣವನ್ನು ತಂದೆ ತಾಯಿ ಮತ್ತು ಆ ಕುಟುಂಬದ ಸದಸ್ಯರು ಕೊಡುತ್ತಿದ್ದರು. ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ತಂದೆ ತಾಯಿ ಮತ್ತು ಕುಟುಂಬದ ಪಾತ್ರ ಮುಖ್ಯವಾದುದು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗುವುದರಿಂದ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಬೆಳೆಸುವುದು ಒಳ್ಳೆಯದು. ಹಿಂದೆ ತಂದೆ ತಾಯಿಯಾದವರು ಮಗುವಿಗೆ ಶಿವಶರಣರ, ಮಹಾಪುರುಷರ ಕಥೆಗಳನ್ನು ಹೇಳುತ್ತ, ಒಳ್ಳೆಯ ಮೌಲ್ಯಗಳನ್ನು ಹೇಳುತ್ತ ಆ ಮಗುವಿನ ನಡೆ, ನುಡಿ, ಒಳ್ಳೆಯ ಸಂಸ್ಕೃತಿ ಬೆಳೆಸಲು ಕಷ್ಟ ಪಡುತ್ತಿದ್ದಳು. ಆದರೆ ಇಂದಿನ ದಿನಗಳಲ್ಲಿ ಆಧಿನಿಕತೆಯ ಯಂತ್ರಕ್ಕೆ ಸಿಕ್ಕು ಮಗುವಿನ ಬೆಳವಣಿಗೆ ಮತ್ತು ಭವಿಷ್ಯದ ಬಗ್ಗೆ ಚಿಂತಿಸುವಷ್ಟು ಪುರುಸೊತ್ತು ಇಂದಿನ ತಂದೆ- ತಾಯಂದಿರ ಹತ್ತಿರವಿಲ್ಲ. ಎಲ್ಲರು ಕೆಲಸದ ಒತ್ತಡದಲ್ಲಿರುವುದರಿಂದ ಮಕ್ಕಳನ್ನು ಯಾವುದೋ ಆಯಾ ಹತ್ತಿರ ಬಿಟ್ಟು ಹೋಗುತ್ತಾರೆ. ಇದರಿಂದ ಮಗು ತಂದೆ- ತಾಯಿಯ ಪ್ರೀತಿಯಿಂದ ಮತ್ತು ಮಾರ್ಗದರ್ಶನದಿಂದ ವಂಚಿತವಾಗುತ್ತದೆ.
ಈ ರೀತಿ ಒಳ್ಳೆಯ ಮಾರ್ಗದರ್ಶನ ಸಿಗದೇ ಹೋದ ಮತ್ತು ನಿರ್ಲಕ್ಷಕ್ಕೆ ಒಳಗಾದ ಮಕ್ಕಳು ಮುಂದೆ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಇಂದಿನ ದಿನ ನಾವು ನೋಡುವಂತೆ ಕೆಲವೊಂದು ಯುವಕರು ಮಧ್ಯಸೇವನೆ ಮಾಡಿ ಸಭ್ಯ ಜನರನ್ನು ಹೀಯಾಳಿಸುವುದು ಮತ್ತು ಮಹಿಳೆಯರನ್ನು ಚುಡಾಯಿಸುವುದು ಮತ್ತು ಕಾನೂನಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಬೈಕ್ ಓಡಿಸುವುದು ಹೀಗೆ ಅಸಭ್ಯವಾಗಿ ನಡೆದುಕೊಳ್ಳುವುದು ಸಾಮಾನ್ಯವಾಗಿದೆ. ಆದ ಕಾರಣ ಹಿರಿಯರು ತಂದೆ ತಾಯಿಗಳು ಮಕ್ಕಳ ಬೆಳವಣಿಗೆಯಲ್ಲಿ ನಿಗಾ ವಹಿಸಬೇಕು.
Thursday, June 4, 2009
ರೈತನೇ ನಿಜವಾದ ಕೃಷಿ ವಿಜ್ಣಾನಿ
ವಿಜ್ಞಾನ ಅಭಿವೃದ್ಧಿ ಹೊಂದಿದಂತೆ ಹಲವಾರು ಬದಲಾವಣೆಗಳನ್ನು ನಾವು ನಮ್ಮ
ಜೀವನದಲ್ಲಿ ಕಾಣುತ್ತಿದ್ದೇವೆ. ಹಾಗೆ ಕೃಷಿಯಲ್ಲಿಯೂ ಕೂಡ ಗಣನೀಯ ಬದಲಾವಣೆಗಳು ಆಗುತ್ತಿರುವದನ್ನು ನಾವು ಗಮನಿಸಬಹುದಾಗಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆದ ಹಸಿರು ಕ್ರಾಂತಿ ಕೃಷಿ ರಂಗದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತಂದಿತು. ಆ ಸಮಯದಲ್ಲಿ ಕೃಷಿ ವಿಜ್ಞಾನಿಗಳು ಹೈಬ್ರೀಡ್ ತಳಿಗಳನ್ನು ಕಂಡು ಹಿಡಿದು ರೈತರಿಗೆ ಬೆಳೆಯಲು ಕೊಟ್ಟರು. ಸಾವಯವ ಪ್ರಧಾನವಾಗಿದ್ದ ಕೃಷಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅಪರಿಮಿತ ಬಳಕೆಯಲ್ಲಿ ಭೂಮಿ ನಲುಗುವಂತಾಯಿತು.
ರೈತ ಅಧಿಕ ಬೆಳೆ ಬೆಳೆದು ಹೆಚ್ಚಿನ ಉತ್ಪನ್ನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದ. ರೈತರು ಕುಲಾಂತರಿ ತಳಿಯ ಹೈಬ್ರೀಡ್ ಬೀಜಗಳನ್ನು ಬಿತ್ತುತ್ತ ದೇಶಿ ಮೂಲದ ತಳಿಗಳನ್ನು ಮರೆಯತೊಡಗಿದ. ಸಾವಯವ, ಕೊಟ್ಟಿಗೆ ಗೊಬ್ಬರಗಳ ಬದಲು ರಾಸಾಯನಿಕ ಗೊಬ್ಬರಗಳನ್ನು ಬಳಸಲು ಪ್ರಾರಂಭಿಸಿದ. ಮೊದಲು ರೈತ ತನ್ನ ಮನೆಯಲ್ಲಿ ಸಾಕಿದ ಜಾನುವಾರುಗಳ ಸಗಣಿಯಿಂದ ಗೊಬ್ಬರವನ್ನು ತಯಾರಿಸಿ ಕೃಷಿ ಭೂಮಿಗೆ ಬಳಸುತ್ತಿದ್ದ, ಆದರೆ ಅದು ಇಂದಿನ ದಿನ ಕಡಿಮೆಯಾಗಿದೆ.
ಭಾರತೀಯ ಕೃಷಿ ಜಾಗತೀಕರಣದ ಸುಳಿಗೆ ಸಿಕ್ಕು ನಲಗುತ್ತಿದೆ. ರೈತ ತನ್ನ ಕೃಷಿ ಮೌಲ್ಯಗಳನ್ನು ಮರೆತು ಪಾಶ್ಚಾತ್ಯರ ಕೃಷಿ ಪದ್ಧತಿಗೆ ಮೊರೆ ಹೋಗುತ್ತಿದ್ದಾನೆ. ರೈತ ಕುಲಾಂತರಿ ತಳಿಗಳನ್ನು ಉಪಯೋಗಿಸಲು ಪ್ರಾರಂಭಿಸಿದ್ದರಿಂದ ಎಷ್ಟೋ ಮೂಲ ದೇಶಿ ಬೀಜ ತಳಿಗಳು ಕಣ್ಮರೆಯಾದವು. ಆದಕಾರಣ ರೈತರು ದೇಶಿ ತಳಿಗಳ ಸಂರಕ್ಷಣೆಗೆ ಮುಂದಾಗಬೇಕಾದುದು ಅವಶ್ಯಕವಾಗಿದೆ.
ವೈರಸ್, ಬ್ಯಾಕ್ಟೀರಿಯಾ, ಚೇಳು, ಜೇಡ ಮತ್ತಿತರ ಜೀವಿಗಳಿಂದ ವಂಶವಾಹಿಗಳನ್ನು ಹೊರತಗೆದು ಬದನೆ, ಬೆಂಡೇಕಾಯಿ, ಆಲೂಗಡ್ಡೆ, ಟೊಮ್ಯಾಟೋ ಮತ್ತು ಮೆಕ್ಕೇಜೋಳದಂಥ ಆಹಾರ ಧಾನ್ಯಗಳ ವಂಶವಾಹಿಯೊಳಗೆ ಬಲವಂತದಿಂದ ಸೇರಿಸಲಾಗುತ್ತ್ದದೆ, ಇದೇ ಕುಲಾಂತರಿ ಆಹಾರ ಧಾನ್ಯ . ಕುಲಾಂತರಿ ಆಹಾರ ಧಾನ್ಯಗಳನ್ನು ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಪರೀಕ್ಷಿಸಿದಾಗ ಅವುಗಳ ಆರೋಗ್ಯ ಹದಗೆಟ್ಟ ಆತಂಕಕಾರಿ ಸಂಗತಿ ಪತ್ತೆಯಾಗಿದೆ. ಇಷ್ಟೇ ಅಲ್ಲದೆ ಸಾಕಷ್ಟು ಇಲಿಗಳು ಅಕಾಲಿಕ ಸಾವಿಗೆ ತುತ್ತಾಗಿವೆ. ಕುಲಾಂತರಿ ಆಹಾರ ಸೇವಿಸಿದ ಪ್ರಾಣಿಗಳ ಸಂತಾನ ಶಕ್ತಿ ಕುಂಠಿತಗೊಂಡು ಅವುಗಳ ಅಂಗಗಳು ಹಾಗೂ ಕೋಶಗಳು ಹಾನಿಗೆ ಈಡಾಗಿವೆ ಎಂಬುದನ್ನು ವಿಜ್ಞಾನಿಗಳಿಂದ ತಿಳಿಯಲಾಗಿದೆ.
ಒಮ್ಮೆ ಕುಲಾಂತರಿ ಬೆಳೆ ಬೆಳೆಯಲು ಆರಂಭವಾರೆ ನಿಸರ್ಗದಲ್ಲಿನ ವಂಶವಾಹಿ ವ್ಯವಸ್ಥೆ ಸಂಪೂರ್ಣ ಬುಡಮೇಲಾಗುವ ಸಾಧ್ಯತೆ ಇದೆ. ಈ ಕುಲಾಂತರಿ ಬೆಳೆಗಳಿಂದಾಗುವ ದುಷ್ಪರಿನಾಮವನ್ನರಿತ ಹಲವಾರು ಪ್ರಮೂಕ ವಿಜ್ಞಾನಿಗಳೂ ಇದನ್ನು ವಿರೋಧಿಸಿದ್ದಾರೆ. ಆದ್ದರಿಂದ ಈ ಕುಲಾಂತರಿಯನ್ನು ನಮ್ಮ ಸರ್ಕಾರ ನಿಷೇಧಿಸುವ ಅವಶ್ಯಕತೆ ಇದೆ. ನಮ್ಮ ಕೃಷಿ ವಿಶ್ವ ವಿದ್ಯಾಲಯಗಳು ದೇಶಿ ತಳಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕಾದ ಅವಶ್ಯಕತೆ ಇದೆ.
ಭಾರತ ಶೇ೭೫ರಷ್ಟು ಜನರ ಉದ್ಯೋಗ ಕೃಷಿ, ಆದರೂ ಆಹಾರ ಧಾನ್ಯಗಳಿಗೆ ಬೇರೆ ರಾಷ್ಟ್ರವನ್ನು ಅವಲಂಭಿಸಿರುವುದು ವಿಷಾದನೀಯ. ಆದ್ದರಿಂದ ಸರ್ಕಾರ ಕೃಷಿಗೆ ಹೆಚ್ಚು ಒತ್ತು ಕೊಟ್ಟು ಒಳ್ಳೆಯ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಮತ್ತು ರೈತರನ್ನು ಆರ್ಥಿಕವಾಗಿ ಸ್ತೂಲರನ್ನಾಗಿಸಲು ಹೆಚ್ಚು ಹೆಚ್ಚು ಯೋಜನೆಗಳನ್ನು ಜಾರಿಗೊಳಿಸಬೇಕು.
Wednesday, June 3, 2009
ಅವಮಾನಕರವಾಗದಿರಲಿ ಈ ಅನುಕರಣೆ
ಮನು
ಷ್ಯನ ಜೀವನದಲ್ಲಿ ಅನುಕರಣೆ ಅವಶ್ಯಕ ಮತ್ತು ಅನಿವಾರ್ಯ. ಆದರೆ, ಆ ಅನುಕರಣೆ ಅವಮಾನಕರವಾಗಬಾರದು. ಈಗಿನ ನಮ್ಮ ಜೀವನ ಶೈಲಿಗೂ ಮತ್ತು ನಮ್ಮ ಹಿಂದಿನ ಸಂಸ್ಕೃತಿಗೂ ಹೋಲಿಸಿದರೆ ಬಹಳ ವ್ಯತ್ಯಾಸ ಕಂಡುಬರುತ್ತದೆ. ಇದಕ್ಕೆ ಕಾರಣ ಅನುಕರಣೆ.ಪಾಶ್ಚಾತ್ಯರ ಆಕ್ರಮನಗಳ ನಂತರ ನಮ್ಮ ಸಮಾಜದಲ್ಲಿ ಹಲವಾರು ಬದಲಾವಣೆಗಳು ತೀವ್ರಗತಿಯಲ್ಲಿ ಆದವು. ಉಡುಗೆ-ತೊಡುಗೆಗಳಲ್ಲಿ, ಊಟ-ಉಪಚಾರಗಳಲ್ಲಿ, ಆಡುವ ಮಾತಿನಲ್ಲಿ, ಮೌಲ್ಯ-ಸಿದ್ಧಾಂತಗಳಲ್ಲಿ ಹೀಗೆ ಪ್ರತಿಯೊಂದರಲ್ಲೂ ಹಲವಾರು ಬದಲಾವಣೆಗಳಾದವು. ಇದಕ್ಕೆ ಕಾರಣ ಅನುಕರಣೆ ಎನ್ನಬಹುದು.
ಅನುಕರಣೆ ಎಂಬ ಪ್ರಕ್ರಿಯೆ ನಮ್ಮ ಸಂಪ್ರದಾಯ ಮತ್ತು ಸುಸಂಸ್ಕೃತ ಜೀವನ ಮಟ್ಟವನ್ನೇ ಬದಲಾಯಿಸಿಬಿಟ್ಟಿದೆ. ಈ ಅನುಕರಣೆ ಎಂಬ ಪ್ರಕ್ರಿಯೆ ಆಧುನಿಕತೆಯಿಂದ ಮತ್ತೆ ಪ್ರಾಚೀನತೆಗೆ ಕರೆದೋಯುತ್ತಿದೆ ಎಂದರೆ ತಪ್ಪಾಗಲಾರದು. ಹಿಂದೆ ಅಂದರೆ, ಪ್ರಾಚೀನ ಯುಗದಲ್ಲಿ ಮನುಷ್ಯ ಮೈಮೇಲೆ ಬಟ್ಟೆಗಳನ್ನು ಉಪಯೋಗಿಸದೆ ಬೆತ್ತಲೆಯಾಗಿ , ಸಿಕ್ಕ ಸಿಕ್ಕ ಪ್ರಾಣಿಗಳನ್ನು ಹಿಡಿದು ತಿಂದು ಬಿಡುತ್ತಿದ್ದ. ಅವನಿಗೆ ಸಂಬಂಧ, ಕಣಿಕರ, ಪ್ರೀತಿ- ವಾತ್ಸಲ್ಯಗಳ ಅರಿವು ಇರಲಿಲ್ಲ.
ಆ ಪ್ರಾಚೀನ ಮಾನವ ಸುಧಾರಿಸುತ್ತ ಆಧುನಿಕತೆಗೆ ಸಾಗಿ ಬಂದು ತನ್ನ ಹಲವಾರು ಕ್ರೂರತೆ ಮತ್ತು ಅಂಧತೆಗಳನ್ನು ಹೋಗಲಾಡಿಸಿ ಮಾನವೀಯತೆಯ ಜೀವನ ನಡೆಸತೊಡಗಿದ. ಈ ಹಂತಕ್ಕೆ ಬಂದ ಮಾನವ ಅಂದರೆ ಈಗಿರುವ ನಾವು ಉತ್ತಮ ಮೌಲ್ಯಗಳನ್ನು ಮತ್ತು ಮಾನವೀಯತೆಯ ಜೀವನವನ್ನು ಮರೆತು ಮತ್ತೆ ಪ್ರಾಚೀನ ಮಾನವರಾಗಲು ಹೊರಟಿದ್ದೇವೆ ಎಂಬುದು ಇಂದಿನ ದಿನ ಪಾಶ್ಚಾತ್ಯರಲ್ಲಿ ಬಟ್ಟೆಯ ಮೇಲಿನ ಆಸಕ್ತಿ ಕಡಿಮೆಯಾಗುತ್ತಿರುವುದನ್ನು ನೋಡಿದರೆ ತಿಳಿಯುತ್ತದೆ. ಈ ಪಾಶ್ಚಾತ್ಯರ ಜೀವನ ಶೈಲಿ ಇತ್ತೀಚೆಗೆ ನಮ್ಮಲ್ಲಿಯೂ ಕಾಣುತ್ತಿದೆ.
ಇನ್ನು ಇಂದಿನ ಆಹಾರದ ಬಗ್ಗೆ ಮಾತಾಡೋನ, ನಮ್ಮ ಸಮಾಜದಲ್ಲಿ ಮೊದಲಿನಿಂದ ಅಹಿಂಸೆಯೇ ನಮ್ಮ ಧರ್ಮ, ದಯೆ ಇರಲಿ ಸಕಲ ಪ್ರಾಣಿಗಳಲ್ಲಿ ಎಂಬ ತತ್ವದ ಆಚರಣೆ ಇತ್ತು. ಆದರೆ ಇಂದು ಪಾಶ್ಚಾತ್ಯರ ಆಹಾರ ಪದ್ಧತಿಯ ಅನುಕರಣೆಯಿಂದ ನಮ್ಮವರು ಕೂಡ ಹಿಂಸೆಯ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಭೂಮಿಯ ಮೇಲಿನ ಪ್ರತಿಯೊಂದು ಪ್ರಾಣಿಯನ್ನು ಮನುಷ್ಯ ಸ್ವಲ್ಪವೂ ಸಂಕೋಚ, ಕಣಿಕರವಿಲ್ಲದೆ ಭಕ್ಷಿಸುತ್ತಾನೆ. ಇದು ಪ್ರಾಚೀನ ಜೀವನಕ್ಕೆ ಹೋಲಿಕೆಯಾಗುತ್ತದೆ.
ಇನ್ನೊಂದು ಸಮಾಜದ ಅನುಕರಣೆ ಹೇಗೆ ನಡೆಯುತ್ತ ಹೋಗುತ್ತದೆಯೊ ಹಾಗೆ ತನ್ನತನವನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಹಾಗೇ ಇಂದು ನಮ್ಮ ಸಮಾಜದಲ್ಲಿ ಪ್ರತಿಯೊಂದರಲ್ಲೂ ಪಾಶ್ಚಾತ್ಯರ ಜೀವನ ಶೈಲಿಯನ್ನೇ ಕಾಣುತ್ತೇವೆ ವಿನಃ ನಮ್ಮತನವನ್ನಲ್ಲ. ೧೨ ನೇ ಶತಮಾನದ ಬಸವಣ್ಣನವರು ಸಮಾಜದ ಸುಧಾರಣೆಗೆ ಮತ್ತು ನಮ್ಮ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಿದರು. ವಿವೇಕಾನಂದರು ಭಾರತವೇ ಶ್ರೇಷ್ಟ ಎಂಬ ಮಂತ್ರ ಸಾರಿದರು. ಆದರೆ ನಾವು ಇಂದು ನಮ್ಮ ಸಂಸ್ಕೃತಿ, ಪರಂಪರೆಯನ್ನು ಮರೆತು ಪಾಶ್ಚಾತ್ಯರ ಅನುಕರಣೆ ಮಾಡುತ್ತಿದ್ದೇವೆ, ಇದು ಎಷ್ಟರ ಮಟ್ಟಿಗೆ ಸರಿ?
ನಮ್ಮ ದೇಶ ಹಿಂದಿನಿಂದಲೂ ತನ್ನದೆ ಆದ ವೈಶಿಷ್ಟ್ಯಗಳನ್ನು ಕಾಪಾಡಿಕೊಂಡು ಬಂದಿದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಬೇರೆಯವರ ಒಳ್ಳೆಯ ವಿಚಾರಗಳನ್ನು ಅನುಕರಣೆ ಮಾಡುವುದು ತಪ್ಪಲ್ಲ ಹಾಗಂತ ನಮ್ಮತನವನ್ನು ಮರೆಯುವುದು ತಪ್ಪು. ಕ್ಷನಿಕ ಸುಕಕ್ಕೋಸ್ಕರ ಇರುವ ನೀತಿಗಳನ್ನು ನಾವು ಅನುಕರಿಸುವುದು ಬಹಳ ಹೇಯ್ಯ.