Saturday, May 30, 2009

ಉಚ್ಛಾಟಿಸಿ ಈ ಭಿಕ್ಷಾಟನೆಯನ್ನು



ಭಿಕ್ಷಾಟನೆ ಒಂದು ಸಾಮಾಜಿಕ ಪಿಡುಗು ಹಾಗೂ ಅಪರಾಧ, ಕರ್ನಾಟಕ ಭಿಕ್ಷಾಟನೆ ನಿಷೇದ ಅಧಿನಿಯಮ ೧೯೭೫ ರ ಸೆಕ್ಷೆನ್ ೩ರ ಅನ್ವಯ ಭಿಕ್ಷೆಬೇಡುವುದನ್ನು ನಿಷೇಧಿಸಲಾಗಿದೆ. ಭಿಕ್ಷೆ ಬೇಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.



ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯಿದೆ ೧೯೭೫ ರ ಸೆಕ್ಷೆನ್ ೧೨ ರನ್ವಯ ಭಿಕ್ಷಾಟನೆಯಲ್ಲಿ ತೊಡಗಿದ ಅಪರಾಧಕ್ಕಾಗಿ ಗರಿಷ್ಠ ೩ ವರ್ಷದವರೆಗೆ ಶಿಕ್ಷೆಗೆ ಗುರಿಪಡಿಸಲು ಅವಕಾಶವಿದೆ. ಇಷ್ಟೆಲ್ಲಾ ಕಾಯ್ದೆ, ಕಾನೂನುಗಳಿದ್ದರೂ ಭಿಕ್ಷಾಟನೆ ಪ್ರಚಲಿತವಿರುವುದು ವಿಷಾದನೀಯ . ಈ ಭಿಕ್ಷಾಟನೆ ಪಿಡುಗಿನಿಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹೊರತಾಗಿಲ್ಲ. ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಸಾರ್ವಜನಿಕ ಸ್ಥಳಗಳಾದ ದೇವಾಲಯ, ಚರ್ಚ, ಮಸೀದಿ, ಬಸ್ ನಿಲ್ದಾಣ, ರೇಲ್ವೇ ನಿಲ್ದಾಣ ಮತ್ತು ಸಿನಿಮಾ ಮಂದಿರಗಳ ಮುಂದೆ ಹಾಗೂ ಮನೆ, ಅಂಗಡಿ ಮುಂತಾದ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಿರುವವರನ್ನು ನಾವು ಕಾಣಬಹುದು.



ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಇಂಥಹ ಭಿಕ್ಷುಕರನ್ನು ದೃಷ್ಠಿಯಲ್ಲಿಟ್ಟುಕೊಂಡು `ನಿರಾಶ್ರಿತರ ಪರಿಹಾರ ಕೇಂದ್ರ'ಗಳನ್ನು ತೆರೆದಿದೆ. ಕರ್ನಾಟಕದ ಒಟ್ಟು ೧೪ ಜಿಲ್ಲೆಗಳಲ್ಲಿ ಈ ನಿರಾಶ್ರಿತರ ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ. ಅದೇ ರೀತಿ ಹುಬ್ಬಳ್ಳಿಯ ರಾಯಾಪುರದಲ್ಲಿ `ನಿರಾಶ್ರಿತರ ಪರಿಹಾರ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ.



ಈ ಕೇಂದ್ರದಲ್ಲಿ ೯೮ ಪುರುಷರು ಮತ್ತು ೨೬ ಮಹಿಳೆಯರಿಗೆ ಆಶ್ರಯ ನೀಡಲಾಗಿದೆ. ಇಲ್ಲಿರುವ ನಿರಾಶ್ರಿತರಿಗೆ ಫೈಲ್ ಮತ್ತು ಫಿನಾಯಿಲ್ ತಯಾರಿಸುವ ತರಬೇತಿಯನ್ನು ಕೊಟ್ಟು ಅವರಿಂದಲೇ ತಯಾರ ಮಾಡಿಸುತ್ತಾರೆ. ತಿಂಗಳಿಗೆ ಎರೆಡು ಸಾರಿ ವೈದ್ಯರನ್ನು ಇಲ್ಲಿಗೆ ಕರೆಯಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ. ಒಬ್ಬ ವ್ಯಕ್ತಿಯನ್ನು ೬ ತಿಂಗಳಿಂದ ೩ ವರ್ಷದವರೆಗೆ ಈ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಇಟ್ಟುಕೊಂಡು, ನಂತರ ಅವನಿಗೆ ಭಿಕ್ಷೆಯಲ್ಲಿ ತೊಡಗದಂತೆ ಕಟ್ಟಳೆಗಳನ್ನು ಹಾಕಿ ಅವರನ್ನು ಬಿಡಲಾಗುತ್ತದೆ.



ರಾಯಾಪುರ ನಿರಾಶ್ರಿತರ ಪರಿಹಾರ ಕೇಂದ್ರದ ಸುಪಿರಿಯೆಂಟೆಡ್ ಆದ ಶ್ರೀ ದಿವಾಕರ್ ಶಂಕಿನದಾಸರ್ ಹೇಳಿದ್ದು ಹೀಗೆ, ಭಿಕ್ಷುಕರು ಹೆಚ್ಚಾಗಲು ಕಾರಣ ಧಾನಿಗಳು, ಭಿಕ್ಷಾಟನೆ ಕಡಿಮೆಯಾಗಬೇಕಾದರೆ ಭಿಕ್ಷೆ ನೀಡುವುದನ್ನು ನಿಲ್ಲಿಸಬೇಕು. ಇಂದಿನ ಕೆಲಸದ ಒತ್ತಡದಲ್ಲಿ ಮತ್ತು ಅವಿಭಕ್ತ ಕುಟುಂಬಗಳ ಹೆಚ್ಚಳದಿಂದ ಕುಟುಂಬದಲ್ಲಿರುವ ವೃದ್ಧರು, ಅಂಗವೈಕಲ್ಯ ಹೊಂದಿದವರು ಬೀದಿಗೆ ಬರುವಂತಾಗಿದೆ.



ಭಿಕ್ಷುಕರನ್ನು ತಂದು ಅವರಿಗೆ ಊಟ, ಬಟ್ಟೆ, ವಸತಿ ಕೊಡುವದರಿಂದ ಭಿಕ್ಷಾಟನೆ ನಿಲ್ಲದು, ಬಿಕ್ಷುಕರಿಗೆ ಅವರವರ ಅಭಿರುಚಿಯ ಉದ್ಯೋಗದ ಮೇಲೆ ತರಬೇತಿಯನ್ನು ಕೊಟ್ಟು ಇಲ್ಲಿಂದ ಹೊರಗೆ ಹೋದ ಮೇಲೆ ಅವರು ದುಡಿದು ತಮ್ಮ ಜೀವನವನ್ನು ನಡೆಸಬೇಕು ಅಂದಾಗ ಭಿಕ್ಷಾಟನೆ ನಿಲ್ಲುತ್ತದೆ. ಎಂಬುದು ದಿವಾಕರ್ ರವರ ನಿಲುವು. ಆದರೆ ಇಷ್ಟೊಂದು ವ್ಯವಸ್ಥೆಯನ್ನು ಒದಗಿಸಲು ಈ ಕೇಂದ್ರ ಶಕ್ತಿಯುತವಾಗಿಲ್ಲ ಆದ್ದರಿಂದ ಸರ್ಕಾರ ಈ ನಿರಶ್ರಿತರ ಪರಿಹಾರ ಕೇಂದ್ರಕ್ಕೆ ಹೆಚ್ಚಿನ ಯೋಜನೆಗಳನ್ನು ಜಾರಿಮಾಡುವುದು ಅವಶ್ಯಕ.



ಈ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಸುಮಾರು ೧೫೦ ಜನ ಭಿಕ್ಷುಕರಿಗೆ ಆಶ್ರಯ ನೀಡಬಹುದು. ಆದರೆ ಹುಬ್ಬಳ್ಳಿಯೊಂದರಲ್ಲೇ ಅಸಂಖ್ಯಾತ ಭಿಕ್ಷುಕರಿದ್ದಾರೆ ಅವರಿಗೆಲ್ಲ ಈ ಕೇಂದ್ರದಲ್ಲಿ ಆಶ್ರಯ ಕೊಡಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಈ ನಿರಾಶ್ರಿತರ ಕೇಂದ್ರಗಳಿಗೆ ಹೆಚ್ಚಿನ ಒತ್ತು ಕೊಟ್ಟು ಆರ್ಥಿಕ ಸಹಾಯ ಮಾಡಬೇಕು ಮತ್ತು ಭಿಕ್ಷಾಟನೆ ತೊಲಗಿಸಲು ಯೋಜನೆಗಳನ್ನು ಹಮ್ಮಿಕೊಳ್ಳಬೇಕು.

No comments:

Post a Comment